ಜ.31 ರಿಂದ 3 ದಿನ ಬ್ಯಾಂಕ್ ಬಂದ್..! ನಾಳೆಯೇ ಕೆಲಸ ಮುಗಿಸ್ಕೊಂಡ್ಬಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29-ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ಒಕ್ಕೂಟಗಳ ಸಂಘ ಇದೇ 31ರಿಂದ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.
ಶೇ.20ರಷ್ಟು ವೇತನ ಹೆಚ್ಚಳ, ವಾರದಲ್ಲಿ ಐದು ದಿನ ಬ್ಯಾಂಕ್ ಕಾರ್ಯ ನಿರ್ವಹಣೆ, ಹೊಸ ಪಿಂಚಣಿ ಯೋಜನೆ ಕೈಬಿಡುವುದು, ಪಿಂಚಣಿಯನ್ನು ಪರಿಷ್ಕರಣೆ ಮಾಡುವುದು, ಕುಟುಂಬ ಪಿಂಚಣಿಯನ್ನು ಉತ್ತೇಜನ ಮಾಡುವುದು, ಸಿಬ್ಬಂದಿ ಕಲ್ಯಾಣ ವೇತನವನ್ನು ಏರಿಕೆ ಮಾಡುವುದು ಎಲ್ಲ ನೌಕರರಿಗೂ ಒಂದೇ ಸಮಯವನ್ನು ನಿಗದಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂಬುದು ಬ್ಯಾಂಕ್ ಒಕ್ಕೂಟಗಳ ಮನವಿಯಾಗಿದೆ.

ಆದರೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಜ.31ರಿಂದ ಫೆ.1ರವರೆಗೆ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು ಎಂದು ಸಂಯುಕ್ತ ಬ್ಯಾಂಕ್ ಒಕ್ಕೂಟಗಳ ವೇದಿಕೆ ಸಮನ್ವಯಾಧಿಕಾರಿ ಶ್ರೀನಿವಾಸ್ .ಎಸ್.ಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜ.31 ಮತ್ತು ಫೆ.1ರವರೆಗೆ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಮುಷ್ಕರ ನಡೆಸುತ್ತೇವೆ. ಆಗಲಾದರೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಫೆ.11, 12, 13ರಂದು ಪುನಃ ಮುಷ್ಕರ ನಡೆಸಲಾಗುವುದು. ಇದಕ್ಕೂ ಒಪ್ಪದಿದ್ದರೆ ಏ.1ರಿಂದ ಅನಿರ್ಧಿಷ್ಟವಾಗಿ ಮುಷ್ಕರ ನಡೆಸುತ್ತೇವೆ ಎಂದು ತಿಳಿಸಿದರು.

ನಮ್ಮ ಹೋರಾಟಕ್ಕೆ ಬಹುತೇಕ ಎಲ್ಲ ಬ್ಯಾಂಕ್‍ಗಳು ಬೆಂಬಲ ಸೂಚಿಸಿದ್ದು, ನಾವು ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುತ್ತಿಲ್ಲ. ನಮ್ಮ ಬೇಡಿಕೆಗಳು ನ್ಯಾಯಯುತವಾಗಿರುವುದರಿಂದ ಅನಿವಾರ್ಯವಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು. ಇಂದಿನ ಬೆಲೆ ಏರಿಕೆಯಲ್ಲಿ ನಾವು ಕೂಡ ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲ ನೌಕರರ ವೇತನವನ್ನು ಪರಿಷ್ಕರಣೆ ಮಾಡಿರುವಾಗ ನಮಗೇಕೆ ತಾರತಮ್ಯ ಎಂದು ಪ್ರಶ್ನೆ ಮಾಡಿದರು.

ಇತ್ತೀಚೆಗೆ ಬ್ಯಾಂಕ್ ಕೆಲಸವು ಒತ್ತಡದಿಂದ ಕೂಡಿದೆ. ಹೀಗಾಗಿ ನಮಗೂ ವಾರದಲ್ಲಿ ಐದು ದಿನ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ನಿಯಮವನ್ನು ಜಾರಿ ಮಾಡಬೇಕು. ಹೀಗೆ ಹಲವು ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

ಎರಡು ದಿನ ಮುಷ್ಕರ:
ಹೊಸ ಪಿಂಚಣಿ ಯೋಜನೆ ರದ್ಧತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.31 ಮತ್ತು ಫೆ.1 ರವರೆಗೆ ಬೆಳಗ್ಗೆ 10 ಗಂಟೆಗೆ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ ವತಿಯಿಂದ ಮುಷ್ಕರ ಹಮ್ಮಿಕೊಂಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕ ಎಚ್.ವಿ.ರೈ ತಿಳಿಸಿದರು.

Facebook Comments