ನ.5ರೊಳಗೆ ಸಾಲಗಾರರ ಖಾತೆಗೆ ಚಕ್ರಬಡ್ಡಿ ಹಣ ವಾಪಸ್‍..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.27- ಕೊರೊನಾ ಪಿಡುಗಿನಿಂದಾಗಿ ವಿವಿಧ ಸಾಲ ಪಡೆದವರಿಗೆ ವಿಧಿಸಲಾಗಿದ್ದ ಚಕ್ರಬಡ್ಡಿಯನ್ನು ನ.5ರೊಳಗೆ ಅವರ ಖಾತೆಗಳಿಗೆ ವಾಪಸ್ ನೀಡುವಂತೆ ಕೇಂದ್ರ ಸರ್ಕಾರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಎರಡು ಕೋಟಿ ರೂ.ವರೆಗೆ ಗೃಹ, ವಾಹನ, ಶಿಕ್ಷಣ, ಗೃಹೋಪಯೋಗಿ ವಸ್ತುಗಳ ಖರೀದಿ, ಕ್ರೆಡಿಟ್ ಕಾರ್ಡ್‍ಗಳ ಬಾಕಿ ಇತ್ಯಾದಿ ಸಾಲಗಳ ಮೇಲೆ ಐದು ತಿಂಗಳುಗಳ ಕಾಲ (ಮಾ.1ರಿಂದ ಆ.31ರವರೆಗೆ ) ವಿಧಿಸಲಾದ ಬಡ್ಡಿ ಮೇಲಿನ ಬಡ್ಡಿ (ಚಕ್ರಬಡ್ಡಿ) ಮೊತ್ತವನ್ನು ನ.5ರೊಳಗೆ ವಾಪಸ್ ಮಾಡುವಂತೆ ಕೇಂದ್ರ ಹಣಕಾಸು ಸಚಿವಾಲಯ ಬ್ಯಾಂಕುಗಳಿಗೆ ಸೂಚಿಸಿದೆ.

ಎರಡು ಕೋಟಿ ರೂ.ವರೆಗಿನ ಸಾಲ ಪಡೆದವರಿಗೆ ಈ ಸೌಲಭ್ಯ ಲಭಿಸಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು, ವಸತಿ ಸಾಲ ನೀಡಿಕೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು, ನ.5ರೊಳಗೆ ಸಾಲಿಗರ ಖಾತೆಗಳಿಗೆ ವಸೂಲು ಮಾಡಲಾದ ಚಕ್ರಬಡ್ಡಿ ಹಣವನ್ನು ವಾಪಸ್ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕೇಂದ್ರದಿಂದ ತಾವು ಪಾವತಿಸಿದ ಮೊತ್ತವನ್ನು ವಾಪಸ್ ಪಡೆಯಬಹುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಎರಡು ಕೋಟಿ ರೂ.ವರೆಗಿನ ವಿವಿಧ ಸಾಲಗಳ ಮೇಲಿನ ಬಡ್ಡಿ ಮನ್ನಾದಿಂದ ಹಣಕಾಸು ಸಚಿವಾಲಯಕ್ಕೆ 6500 ಕೋಟಿ ರೂ.ಗಳಿಗೂ ಅಧಿಕ ಹೊರೆ ಬಿದ್ದಿದೆ.

ಕೊರೊನಾ ಪಿಡುಗಿನಿಂದ ಸಂಕಷ್ಟದಲ್ಲಿದ್ದ ಸಾಲಗಾರರಿಗೆ ನೆರವಾಗಲು ಆರ್‍ಬಿಐ 5 ತಿಂಗಳ ಕಾಲ ಇಎಂಐ ಪಾವತಿಗೆ ವಿನಾಯ್ತಿ ನೀಡಿತ್ತು. ಈ ಅವಧಿಯಲ್ಲಿ ಸಾಲ ಮರುಪಾವತಿಸದ ಸಾಲಗಾರರಿಗೆ ಸರಳ ಬಡ್ಡಿ ಮತ್ತು ಚಕ್ರ ಬಡ್ಡಿಗಳನ್ನು ಬ್ಯಾಂಕುಗಳು ವಿಧಿಸಿದ್ದವು. ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಅವಧಿಯಲ್ಲಿ ಸರಳ ಹಾಗೂ ಚಕ್ರ ಬಡ್ಡಿಯನ್ನು ಮನ್ನಾ ಮಾಡಿದೆ.

Facebook Comments