ಇಂದಿನಿಂದಲೇ ಬಾರ್-ಪಬ್-ರೆಸ್ಟೋರೆಂಟ್ ಓಪನ್, ಈ ನಿಯಮಗಳು ಅನ್ವಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.1-ಕೋವಿಡ್-19 ಕಾರಣದಿಂದಾಗಿ ಕಳೆದ ಐದು ತಿಂಗಳಿನಿಂದ ಮುಚ್ಚಿದ್ದ ಬಾರ್, ಪಬ್, ರೆಸ್ಟೋರೆಂಟ್ ತೆರೆಯಲು ಶೇ.50 ಆಸನ ಸಾಮಥ್ರ್ಯದೊಂದಿಗೆ ಅವಕಾಶ ನೀಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.

ಕ್ಲಬ್ ಮತ್ತು ಬಾರ್ ಆಂಡ್ ರೆಸ್ಟೋರೆಂಟ್‍ನಲ್ಲಿ ಇಂದಿನಿಂದಲೇ ಗ್ರಾಹಕರಿಗೆ ಆಹಾರದೊಂದಿಗೆ ಮದ್ಯ ಪೂರೈಕೆಯಾಗಲಿದೆ. ಕೇಂದ್ರ ಸರ್ಕಾರದ ಅನ್‍ಲಾಕ್-4ರ ಅನ್ವಯ ರಾಜ್ಯ ಸರ್ಕಾರ ಸೋಮವಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳ ಸಾಮಥ್ರ್ಯದ ಆಧಾರದಲ್ಲಿ ಶೇ.50ರಷ್ಟು ಜನ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು.

ಗ್ರಾಹಕರ ನಡುವೆ ಕನಿಷ್ಟ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕ್ಲಬ್, ಬಾರ್ ಅಂಡ್ ರೆಸ್ಟೋರಂಟ್ ಮತ್ತು ಹೋಟೆಲ್ ಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಸಿ, ಕೇವಲ ಪಾರ್ಸೆಲ್ ಗೆ ಅವಕಾಶವಿತ್ತು. ಇದೀಗ ಊಟದೊಂದಿಗೆ ಮದ್ಯ ಸರಬರಾಜಿಗೂ ಅವಕಾಶ ಮಾಡಿಕೊಡಲಾಗಿದೆ.

ಈ ಸಂಬಂಧ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ತೆರೆಯಲು 50% ಆಸನ ಸಾಮಥ್ರ್ಯದೊಂದಿಗೆ ಅವಕಾಶ ನೀಡಲಾಗಿದೆ. ಆಹಾರದೊಂದಿಗೆ ಬಿಯರ್, ಮದ್ಯ, ವೈನ್ ಸೇವಿಸಲು ಅನುಮತಿ ನೀಡಲಾಗಿದೆ.

ಈ ಹಿಂದಿನ ಆದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕಾರಣದಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ, ಬಿಯರ್, ವೈನ್ ದಾಸ್ತಾನುಗಳನ್ನು ಸೀಲ್ ಬಾಟಲುಗಳಲ್ಲಿ ನಿಗದಿಪಡಿಸಿರುವ ಎಂ.ಆರ್.ಪಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು.

ಅಸ್ಸಾಂ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಮದ್ಯದೊಂದಿಗೆ ಆಹಾರ ಸೇವಿಸಲು ಈಗಾಗಲೇ ಅನುಮತಿ ನೀಡಿವೆ.
ಹೀಗಾಗಿ ಇತರೆ ರಾಜ್ಯಗಳಲ್ಲಿ ಮದ್ಯದೊಂದಿಗೆ ಆಹಾರ ಸೇವಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜಸ್ವ ಸಂಗ್ರಹದ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಮಾರ್ಗಸೂಚಿ ಪಾಲಿಸುವ ಮೂಲಕ ಅವಕಾಶ ನೀಡಿದೆ.

65 ವರ್ಷಕ್ಕಿಂತ ಮೇಲ್ಪಟ್ಟವರು, ಮಕ್ಕಳು ಮತ್ತು ಗರ್ಭಿಣಿಯರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು, ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಜರ್ ಬಳಕೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಬೇಕು. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು.

ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಕೈಗವಸುಗಳನ್ನು ಬಳಸಬೇಕು. ಪಾರ್ಕಿಂಗ್ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಜನದಟ್ಟಣೆಯಾಗದಂತೆ ತಡೆಯಬೇಕು. ಹೊರಭಾಗಗಳಿಂದ ಬರುವ ಗ್ರಾಹಕರ ಪ್ರಯಾಣದ ಇತಿಹಾಸ, ಗುರುತಿನ ಚೀಟಿ ಮತ್ತು ಆರೋಗ್ಯಕ್ಕೆ ಸಂಬಂಸಿದ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಬೇಕು.

ಗ್ರಾಹಕರೊಂದಿಗೆ ಸಂಪರ್ಕ ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಅನೇಕ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

Facebook Comments

Sri Raghav

Admin