ಉನ್ನತ ಶಿಕ್ಷಣ ಉನ್ಮತ್ತ ಶಿಕ್ಷಣವಾಗಿದೆ : ಬರಗೂರು ರಾಮಚಂದ್ರಪ್ಪ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು – ಇತ್ತೀಚೆಗೆ ಉನ್ನತ ಶಿಕ್ಷಣ ಎನ್ನುವುದು ಉನ್ಮತ್ತ ಶಿಕ್ಷಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದರು. ಕೆಎಲ್‍ಇ ಕಾಲೇಜು ಸಭಾಂಗಣದಲ್ಲಿಂದು ಬೆಂಗಳೂರು ಉತ್ತರ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ದಿನಚರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಇಂದು ಶಿಕ್ಷಣ ಅಸಮಾನತೆಯಿಂದ ಕೂಡಿದೆ. ಕೇಂದ್ರದ ಸಿಲಬಸ್ ಓದುವವರು ಮಾತ್ರ ಬುದ್ಧಿವಂತರು ಎಂಬಂತೆ ಬಿಂಬಿಸಲಾಗುತ್ತಿದೆ. ಇದು ತಪ್ಪು. ವೃತ್ತಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಅಸಮಾನತೆಯ ಶಿಕ್ಷಣ ಕೊಡಲಾಗುತ್ತಿದೆ. ಇದು ತಪ್ಪು, ಇದನ್ನು ಹೋಗಲಾಡಿಸಬೇಕು, ಎಲ್ಲರಿಗೂ ಸಮಾನತೆಯ ಶಿಕ್ಷಣ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಶಿಕ್ಷಣೋದ್ಯಮಿಗಳು ಯಾವುದೇ ಕಾರಣಕ್ಕೂ ಶಿಕ್ಷಣ ತಜ್ಞರಾಗಲು ಸಾಧ್ಯವಿಲ್ಲ. ಇಂದು ಶಿಕ್ಷಣ ಸಂಸ್ಥೆಗಳನ್ನು ಮಾರುಕಟ್ಟೆ ನಿಯಂತ್ರಣ ಮಾಡುತ್ತಿದೆ.

ಇದು ಹೋಗಬೇಕು. ಲ್ಯಕಟ್ಟೆಯಲ್ಲಿ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಕೇಂದ್ರೀಯ ಪಠ್ಯಗಳನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡರೆ ನಮ್ಮಲ್ಲಿ ಶಿಕ್ಷಣ ತಜ್ಞರೇ ಇಲ್ಲ ಎಂಬ ಭಾವನೆ ಬರುತ್ತದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಇರುವ ಸಮನ್ವಯದ ಕೊರತೆ ಕಾರಣ. ಈ ಬೇಧಭಾವ ತಪ್ಪಬೇಕು, ಶಿಕ್ಷಣದಲ್ಲಿ ಸಮಾನತೆ ತರಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಿಗೆ ಸ್ಟಾರ್‍ಗಿರಿ ನೀಡಲಾಗುತ್ತಿದೆ. ಸ್ಟಾರ್ ಸಂಸ್ಕøತಿ ಏನಿದ್ದರೂ ಹೊಟೇಲ್‍ಗಳಿಗೆ. ಇದನ್ನೆಲ್ಲ ನೋಡಿದರೆ ಶಿಕ್ಷಣ ಕ್ಷೇತ್ರವನ್ನು ಉದ್ಯಮ ಆವರಿಸುತ್ತಿದೆ ಎನಿಸುತ್ತಿದೆ ಎಂದರು. ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಿ ಸಮಾನತೆ ಶಿಕ್ಷಣವನ್ನು ಬೋಧನೆ ಮಾಡಬೇಕು ಎಂದು ಬರಗೂರು ರಾಮಚಂದ್ರ ಕರೆ ನೀಡಿದರು.

ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳಾದ ನಾಗರಾಜ್, ಗುರುರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments