‘ನನ್ನ ಹೋರಾಟಕ್ಕೆ ಮೋದಿ ಬೆಂಬಲವಿದೆ’ : ಯತ್ನಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಏ.11- ನನ್ನನ್ನು ಪಕ್ಷದಿಂದ ಹೊರ ಹಾಕಬೇಡಿ ಎಂದು ಯಾರನ್ನೂ ಕೈ ಮುಗಿದು ಬೇಡಿಕೊಂಡಿಲ್ಲ. ನೀವೇ ನಮ್ಮ ತಂದೆ-ತಾಯಿ ಎಂದು ಯಾರಿಗೂ ಹೇಳಿಲ್ಲ. ನನ್ನನ್ನು ಪಕ್ಷದಿಂದ ಹೊರಗೆ ಹಾಕುವುದಕ್ಕಿಂತ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಲಿ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹರಿಹಾಯ್ದರು.

ಇಲ್ಲಿನ ಸಿದ್ಧಾರೂಢ ಮಠದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರುವ ರಾಷ್ಟ್ರೀಯ ನಾಯಕರು ವಾಪಸ್ ಹೋಗುವ ಮೊದಲು ನನ್ನನ್ನು ಬೈದು ಹೋಗುತ್ತಾರೆ. ವಿಮಾನದಲ್ಲಿ ಕುಳಿತ ಬಳಿಕ ನಕ್ಕು ಬಿಡುತ್ತಾರೆ. ಇದರ ಮರ್ಮ ಏನೆಂಬುದು ಎಲ್ಲರಿಗೂ ಗೊತ್ತಿದೆ. ಮುಂದೊಂದು ದಿನ ಅದನ್ನೂ ಬಹಿರಂಗ ಪಡಿಸುವೆ ಎಂದರು.

ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. ನನ್ನ ವಿರುದ್ಧ ಹತ್ತೇ ನಿಮಿಷದಲ್ಲಿ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ, ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾಧಾನ ತಂದಿದೆ. ಹೀಗಾಗಿ, ಪಕ್ಷದಿಂದ ನನ್ನನ್ನು ಹೊರಗಡೆ ಹಾಕುವುದಂತೂ ಅಸಾಧ್ಯದ ಮಾತು ಎಂದರು.

ಯಡಿಯೂರಪ್ಪ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ಇಲಾಖೆ ನೋಡಿಕೊಳ್ಳುತ್ತಿದ್ದಾರೆ. ನನಗೆ ಹಿಂದೆ ಷೋಕಾಸ್ ನೋಟಿಸ್ ನೀಡಿದ ಸಮಯದಲ್ಲಿಯೇ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ, ಗೃಹ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 11 ಪುಟಗಳ ದಾಖಲೆಗಳನ್ನು ಕೊಟ್ಟಿದ್ದೇನೆ. ನೋಟಿಸ್ ಕೊಟ್ಟು ಎರಡು ತಿಂಗಳು ಕಳೆದರೂ ನನ್ನ ಮೇಲೆ ಕ್ರಮ ಕೈಗೊಂಡಿಲ್ಲ ಎಂದರೆ ನಾನು ಮಾಡಿದ ಆರೋಪ ಸತ್ಯವಿದೆಯಂದು ಅರ್ಥವಲ್ಲವೇ ಎಂದು ಪ್ರಶ್ನಿಸಿದರು.

ಯತ್ನಾಳ್ ಅವರ ಬಗ್ಗೆ ಶೇ.0.1ರಷ್ಟೂ ವಿಶ್ವಾಸವಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಗತ್ತಿನಲ್ಲಿ ಶೂನ್ಯ ಕಂಡು ಹಿಡಿಯದಿದ್ದರೆ ಸಂಖ್ಯಾಶಾಸ್ತ್ರಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಅರುಣ್ ಸಿಂಗ್ ಲೆಕ್ಕ ಪರಿಶೋಧಕರಾಗಿದ್ದಾರೆ. ಹೀಗಾಗಿ, ಅವರು ಶೇ.0.1ರ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಧನ್ಯವಾದ ಎಂದು ವ್ಯಂಗ್ಯವಾಡಿದರು.

# ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ:
ಯಡಿಯೂರಪ್ಪ ವಿರುದ್ಧ ಒಬ್ಬೊಬ್ಬರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಪಕ್ಷದ ಮಾಲೀಕರಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ. ಕೆ.ಎಸ್.ಈಶ್ವರಪ್ಪ ಕೂಡಾ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಎಲ್ಲ ನಾಯಕರು ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದು ಯತ್ನಾಳ್ ಹೇಳಿದರು.

ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ವಿರೋಸಿ ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಷಿ ಹಾಗೂ ನಾನು ಸೇರಿದಂತೆ ಅನೇಕ ನಾಯಕರು ಮಾತನಾಡಿದ್ದೇವೆ. ಈಗ ಪಕ್ಷದಲ್ಲೇ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದರು.

# ಪ್ರತಿಷ್ಠೆಯಾಗಿಸಿಕೊಳ್ಳಬೇಡಿ:
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಾರ್ಮಿಕರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು ಎಂದರು.

ನೆಟ್, ಬೋಲ್ಟ್ ಬಗ್ಗೆ ಗೊತ್ತಿಲ್ಲದವರು, ಟಿಕೆಟ್ ಕೊಡುವುದು ಹೇಗೆ ಎಂಬುದು ತಿಳಿಯದವರು ಸಾರಿಗೆ ನೌಕರರ ಹೋರಾಟಕ್ಕೆ ನಾಯಕರಾಗಿದ್ದಾರೆ. ಇದರ ಬದಲು ಅಲ್ಲಿನ ಸಿಬ್ಬಂದಿಯೇ ನಾಯಕತ್ವ ವಹಿಸಬೇಕಿತ್ತು. ಬಸ್ಗಳ ಖರೀದಿಯಲ್ಲಿ, ಹಳೆ ಬಸ್ಗಳ ಮಾರಾಟದಲ್ಲಿ ಭ್ರಷ್ಟಾಚಾರ ಆಗುತ್ತಿದೆ. ಇದರಿಂದ ಕೆಎಸ್ಆರ್ಟಿಸಿ ಸೊರಗಿದೆ. ಕಾರ್ಮಿಕರಿಗೆ ಕೊಡಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಬೇಕು ಎಂದರು

Facebook Comments

Sri Raghav

Admin