‘ಡಿಸಿಎಂ ವಿಚಾರ ಮಾತನಾಡದಂತೆ ಬಾಯಿಗೆ ಕಟೀಲ್ ಬೀಗ ಹಾಕಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.27- ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಮಾತನಾಡುವವರ ಬಾಯಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೀಗ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಡಿಸಿಎಂ ಬಗ್ಗೆ ಮಾತನಾಡದಂತೆ ನಳಿನ್ ಕುಮಾರ್ ಕಟೀಲ್ ನೋಟೀಸ್ ನೀಡಿದ್ದು ಹೀಗಾಗಿ ನಾವು ಡಿಸಿಎಂ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಡಿಸಿಎಂ ಸ್ಥಾನ ಬೇಡ ಎಂಬ ಬಗ್ಗೆ ಮೊದಲು ದನಿ ಎತ್ತಿದ್ದೇ ನಾನು. ಈಗ ಪಕ್ಷದ ಅಧ್ಯಕ್ಷರು ನೋಟೀಸ್ ನೀಡಿದ್ದಾರೆ. ಅದಕ್ಕಾಗಿ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದರು. ಸಚಿವ ಸ್ಥಾನ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸದ ಅವರು, ನನಗೆ ಯೋಗ್ಯತೆ, ಅರ್ಹತೆ ಇದ್ದರೆ ಸಚಿವ ಸ್ಥಾನ ಕೊಡಲಿ. ಇಲ್ಲ ಎಂದರೆ ಶಾಸಕನಾಗಿಯೇ ಇರುತ್ತೇನೆ ಎಂದು ಹೇಳಿದರು.

ಗೋಲಿಬಾರ್‍ನಲ್ಲಿ ಮೃತಪಟ್ಟವರಿಗೆ ಘೋಷಣೆ ಮಾಡಿದ್ದ ಪರಿಹಾರದ ಹಣ ಹಿಂಪಡೆದಿರುವುದು ಸರಿಯಾದ ಕ್ರಮವಾಗಿದೆ ಎಂದು ಸಮರ್ಥಿಸಿಕೊಂಡಿರುವ ಅವರು ಸಂಸತ್ತಿಗೆ ಹಾಗೂ ದೇಶಕ್ಕೆ ಅವಮಾನಿಸುವಂತಹ ಪ್ರತಿಭಟನೆಗಳನ್ನು ಹತ್ತಿಕ್ಕಬೇಕು ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ದೇಶದ ಹಿತ ಬಯಸುತ್ತಾರೋ ಅಥವಾ ಪಾಕಿಸ್ತಾನದ ಏಜೆಂಟರಂತೆ ಕೆಲಸ ಮಾಡುತ್ತಾರೋ ಎಂದು ಪ್ರಶ್ನಿಸಿದ ಅವರು, ಭಯೋತ್ಪಾದಕರ ಮತಕ್ಕಾಗಿ ಈ ಎರಡೂ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಇಂತಹವರಿಗೆ ಹಿಂದೂಗಳು ಏಕೆ ಮತ ಹಾಕಬೇಕು. ದೇಶದ ಜನರ ಹಿತಕ್ಕಾಗಿ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ಕಾಯಿದೆಯನ್ನು ವಿರೋಧಿಸುವವರು ದೇಶದ್ರೋಹಿಗಳು ಎಂದು ಹೇಳಿದರು. ನಮ್ಮ ಸಂಸ್ಕøತಿ, ಸಂಪ್ರದಾಯಕ್ಕೆ ತಕ್ಕಂತೆ ಡಿಕೆಶಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸೋನಿಯಾ ಗಾಂಧಿಯವರನ್ನು ಓಲೈಸಲು ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಆದಿಚುಂಚನಗಿರಿ ಸ್ವಾಮೀಜಿಗಳು ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಬುದ್ಧಿ ಹೇಳಬೇಕು. ಕಾಲಭೈರವನ ಇಲ್ಲವೆ ಕೆಂಪೇಗೌಡನ ಬೃಹತ್ ಪ್ರತಿಮೆ ನಿರ್ಮಿಸಲಿ. ಅದನ್ನು ಬಿಟ್ಟು ಏಸು ಪ್ರತಿಮೆ ಏಕೆ? ಎಂದರು.

Facebook Comments