ನೆರೆಪರಿಹಾರ ನೀಡದ ಮೋದಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.01- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿರುವುದರಿಂದಲೇ ನೆರೆ ಪ್ರದೇಶಗಳಿಗೆ ಪರಿಹಾರವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ನೇರವಾಗಿಯೇ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಹಾರದಲ್ಲಿ ಪ್ರವಾಹ ಉಂಟಾದರೆ ಟ್ವೀಟ್ ಮೂಲಕ ಅಲ್ಲಿನ ಸಂತ್ರಸ್ತರಿಗೆ ಸಾಂತ್ವನ ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ಲಕ್ಷಾಂತರ ಜನರು ನೆರೆಯಿಂದ ಸಂಕಷ್ಟಕ್ಕೀಡಾದರೂ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಬಿಡುಗಡೆ ಮಾಡದಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗುರಿಯಾಗಿಟ್ಟುಕೊಂಡೇ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿದೆ. ಯಡಿಯೂರಪ್ಪ ನವರನ್ನು ಯಾವ ಕಾರಣಕ್ಕಾಗಿ ಟಾರ್ಗೆಟ್ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಕರ್ನಾಟಕದಿಂದ 25 ಸಂಸದರನ್ನು ಆಯ್ಕೆ ಮಾಡಿಲ್ಲವೆ ಎಂದು ಪ್ರಶ್ನಿಸಿದರು. ಇಡೀ ದಕ್ಷಿಣ ಭಾರತಕ್ಕೆ ಹೋಲಿಸಿದರೆ ಅತಿ ಹೆಚ್ಚು ಸಂಸದರು ಗೆದ್ದಿರುವುದು ಕರ್ನಾಟಕದಿಂದಲೇ.

ದಕ್ಷಿಣ ಭಾರತದಲ್ಲಿ ಎಷ್ಟು ಸಂಸದರು ಗೆದ್ದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿ ಹೀಗೇ ಮುಂದುವರೆದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಜನ ಮನಸ್ಸು ಮಾಡಿದರೆ ಎಂತೆಂಥವರನ್ನೋ ಮನೆಗೆ ಕಳುಹಿಸಿದ್ದಾರೆ. ಅಂತಹದ್ದರಲ್ಲಿ ಇವರಲ್ಲ ಯಾವ ಲೆಕ್ಕ. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದು ನಾವು. ಪ್ರತಿಯೊಬ್ಬರಿಗೂ ಉತ್ತರ ಕೊಡಬೇಕಾದ್ದು ನಾವೇ ಎಂದು ವಾಗ್ದಾಳಿ ನಡೆಸಿದರು.

ಬಿಹಾರದ ಜನತೆಗೆ ಪ್ರಧಾನಿಯವರು ಟ್ವೀಟ್ ಮಾಡಿ ಸಾಂತ್ವನ ಹೇಳಿದರೆ, ನಮ್ಮ ಜನರಿಗೆ ನಾವೇನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.ನಮ್ಮ ಸಂಸದರು ಸುಮ್ಮನಿರುವುದು ಕೂಡ ಅತ್ಯಂತ ನೋವಿನ ಸಂಗತಿ. ಪ್ರಧಾನಿಯವರ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಬೇಕು. ನನಗೂ ಕೂಡ ಸಂಸದನಾಗಿ, ಸಚಿವನಾಗಿ ಕೇಂದ್ರದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಂಸದರು ಸಂಬಂಧಪಟ್ಟವರಿಗೆ ಏಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಬೇಕು ಎಂದು ಆಗ್ರಹಿಸಿದರು.

ಈಶ್ವರಪ್ಪ -ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ:
ಇನ್ನು ಬಸವನಗೌಡ ಪಾಟೀಲ್ ಯತ್ನಾಳ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಎಸಿ ರೂಮಿನಲ್ಲಿ ಕುಳಿತು ಪಕ್ಷ ಕಟ್ಟುವುದಲ್ಲ, ಹಳ್ಳಿ ಹಳ್ಳಿ ಸುತ್ತಿ ಪಕ್ಷ ಕಟ್ಟಿದವರು ನಾವು. ಇಂಗ್ಲೀಷ್ ಬಂದ ಮಾತ್ರಕ್ಕೆ ಅಂತರಾಷ್ಟ್ರೀಯ ನಾಯಕರಾಗಿ ಬೆಳೆಯುವುದಿಲ್ಲ. ಈಗ ಕೆಲವರು ಮುಖ್ಯಮಂತ್ರಿಯವರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಗೂಟದ ಕಾರು ಇಟ್ಟುಕೊಂಡು ಓಡಾಡುವವರೇ ಹೀಗೆ ಮಾತನಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ನಾವು ಈ ರೀತಿ ಮಾತನಾಡುವುದಾದರೆ ಮೊದಲು ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ. ತುಂಬಾ ಜನ ಪಕ್ಷ ಕಟ್ಟಿದವರು ಸರತಿಯಲ್ಲಿದ್ದಾರೆ ಎಂದು ಈಶ್ವರಪ್ಪ ಮತ್ತು ತೇಜಸ್ವಿ ಹೆಸರು ಹೇಳದೆ ಟೀಕಾ ಪ್ರಹಾರ ನಡೆಸಿದರು.

ಬಳ್ಳಾರಿ ಜಿಲ್ಲೆ ವಿಭಜನೆ ಸಂಬಂಧ ಮುಖ್ಯಮಂತ್ರಿಯವರು ನಾಳೆ ಶಾಸಕರು ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ನಾಳೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬಳಿಕ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ಕೈಗೊಳ್ಳುವರು. ನಾನು ಈಗ ಅದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಕೆಲವರು ಹೊಸ ಜಿಲ್ಲೆ ಬೇಕು ಎಂದು ಹೇಳಿದರೆ, ಇನ್ನು ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾಳೆ ಮುಖ್ಯಮಂತ್ರಿಯವರು ಏನು ತೀರ್ಮಾನ ಕೈಗೊಳ್ಳುವರೋ ಕಾದುನೋಡೋಣ ಎಂದರು.

Facebook Comments