ಡಗ್ಸ್ , ಕಳ್ಳಸಾಗಾಣಿಕೆ ವಿರುದ್ಧ ರಾಜ್ಯ ಸರ್ಕಾರ ಸಾರಿದೆ ಸಾರಿದೆ : ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.10-ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಮಾದಕದ್ರವ್ಯ ಕಳ್ಳ ಸಾಗಾಣಿಕೆ ಮತ್ತು ಮಾರಾಟದ ವಿರುದ್ಧ ರಾಜ್ಯ ಸರ್ಕಾರ ಯುದ್ಧ ಸಾರಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಮಾದಕವಸ್ತು ಎಂಬುದು ಸಾಮಾಜಿಕ ಪಿಡುಗಾಗಿದೆ. ಮಹಾನಗರಗಳು, ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವಸ್ತುಗಳ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಒಂದು ಕ್ಷೇತ್ರ, ಒಂದು ರಾಜ್ಯಕ್ಕೆ ಸೀಮಿತವಾಗಿ ಇದನ್ನು ನೋಡಲಾಗುವುದಿಲ್ಲ.

ಹಾಗಾಗಿ ಗೃಹ ಇಲಾಖೆ ಮಾದಕ ದ್ರವ್ಯಗಳ ವಿರುದ್ಧ ಶೂನ್ಯತಾಳ್ಮೆ(ಜೀರೋ ಟಾಲರೆನ್ಸ್) ತಳಿದಿದೆ. ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಮತ್ತು ಮಾದಕ ವಸ್ತು ಕಳ್ಳ ಸಾಗಾಣಿಕೆದಾರರ ಬೆನ್ನು ಮೂಳೆ ಮುರಿಯಲು ಸೂಚನೆ ನೀಡಲಾಗಿದೆ ಎಂದರು.  ಡ್ರಗ್ಸ್ ಉಪಯೋಗಿಸುವವರನ್ನು ಸಣ್ಣ ಪ್ರಮಾಣದಲ್ಲಿ ಹಿಡಿದರೆ ಪ್ರಯೋಜನವಾಗುವುದಿಲ್ಲ. ಇದರ ಆಳಕ್ಕೆ ಹೋಗಬೇಕಿದೆ. ಇತ್ತೀಚೆಗೆ ಇಂಟರ್ ಮೂಲಕ ಡ್ರಗ್ಸ್ ವಿತರಿಸುವುದು ಹೆಚ್ಚಾಗಿದೆ.

ಡಾರ್ಕ್ ಸರ್ಚಿಂಗ್‍ನಲ್ಲಿ ಡ್ರೀಮ್ ಮಾರ್ಕೆಟ್ ಮತ್ತು ಎಂಪವರ್ ಮಾರ್ಕೆಟ್ ಎಂಬ ವಿಧಾನಗಳಿವೆ. ಇದನ್ನು ಡಾರ್ಕ್ ವೆಬ್ ಎಂದು ಕರೆಯುತ್ತಾರೆ. ಜನಸಾಮಾನ್ಯರು ನೇರವಾಗಿ ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ನಾನಾ ರೀತಿಯ ಕೋಡ್‍ಗಳನ್ನು ಬೇಧಿಸಿ ಪ್ರವೇಶ ಮಾಡಬೇಕು. ಡಾರ್ಕ್ ವೆಬ್‍ನಲ್ಲಿ ವೇಶ್ಯಾವಾಟಿಕೆ, ಶಸ್ತ್ರಾಸ್ತ್ರ ಖರೀದಿ, ಮಾದಕವಸ್ತು ವಹಿವಾಟು ಜೋರಾಗಿ ನಡೆಯುತ್ತಿದೆ.

ನಮ್ಮ ಬೆಂಗಳೂರು ಪೊಲೀಸರು ಅಂತಾರಾಷ್ಟ್ರೀಯ ಮಟ್ಟದ ಡಾರ್ಕ್ ವೆಬ್‍ನ್ನು ಬೇಧಿಸಿದ್ದಾರೆ. ಹಲವರನ್ನು ದಸ್ತಿಗಿರಿ ಮಾಡಿದ್ದೇವೆ. ನಾನಾ ಭಾಗಗಳಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳಿಗಿಂತಲೂ ಒಂದು ಹೆಜ್ಜೆ ಹೆಚ್ಚು ಚಾಣಾಕ್ಷರಿದ್ದರೆ ಮಾತ್ರ ಇದನ್ನು ನಿಭಾಯಿಸಲು ಸಾಧ್ಯ.ಹಾಗಾಗಿ ಸಿಸಿಬಿ ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಇತ್ತೀಚೆಗೆ ಅಂಚೆ ಇಲಾಖೆಯ ನಾಲ್ಕು ಅಧಿಕಾರಿಗಳನ್ನು ಬಂಧಿಸಿದ್ದೇವೆ. ಲೀಡ್ ಪೋಸ್ಟ್‍ನಲ್ಲೇ ಡ್ರಗ್ಸ್‍ಗಳನ್ನು ತರಿಸಲಾಗುತ್ತಿದೆ. 2019ರಲ್ಲಿ 1652 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ಎರಡು ವರ್ಷಕ್ಕಿಂತಲೂ 600 ಪ್ರಕರಣಗಳು ಹೆಚ್ಚಾಗಿವೆ ಎಂದು ವಿವರಿಸಿದರು.

ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೊಯ್ಸಳ ಮತ್ತು ಪಿಂಕ್ ಗಸ್ತುಪಡೆಗಳು ತೀವ್ರ ನಿಗಾ ವಹಿಸಿವೆ. ಗಾಂಜಾ ಸಿಗುತ್ತಿದ್ದ ಕಾಲದಲ್ಲಿ ಈಗ ಸಿಂಥೆಟಿಕ್ ಡ್ರಗ್ಸ್‍ಗಳು ದೊರೆಯುತ್ತಿವೆ. ಚಾಕಲೇಟ್, ಬಿಸ್ಕೆಟ್, ಚಾಕೋ ರೂಪದಲ್ಲಿ ಸಿಗುತ್ತಿರುವ ಸಿಂಥೆಟಿಕ್ ಡ್ರಗ್‍ಗಳನ್ನು ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‍ಗಳಲ್ಲಿ, ಬೀಡಾ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಶಿಕ್ಷಕರು, ಪೋಷಕರು, ಶಿಕ್ಷಣ ಸಂಸ್ಥೆಯ ಮಾಲೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು, ಸರ್ಕಾರದ ಗಮನಕ್ಕೆ ತರಬೇಕು, ಮಾದಕ ವಸ್ತು ಪಿಡುಗನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದೆ. ಯಾವುದೇ ತಾಳ್ಮೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆನಡಿಯನ್, ನೆದರ್‍ಲ್ಯಾಂಡ್, ಆಫ್ರಿಕನ್ ಪ್ರಜೆಗಳನ್ನು ಬಂಧಿಸಿದ್ದೇವೆ ಎಂದು ಹೇಳಿದರು. ಮಾದಕ ವಸ್ತುಗಳನ್ನು ನಿಯಂತ್ರಿಸಲು ಪ್ರತ್ಯೇಕವಾದ ಸೆಲ್ ಪೊಲೀಸ್ ಸ್ಟೇಷನ್‍ಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ 8 ಪೊಲೀಸ್ ಸ್ಟೇಷನ್‍ಗಳನ್ನು ಉದ್ಘಾಟನೆಯಾಗಿದ್ದು, ಜಿಲ್ಲೆಗೊಂದರಂತೆ ಈ ಠಾಣೆಗಳನ್ನು ತೆರೆಯಲಾಗುವುದು. 1985ರ ಕಾನೂನಿಗೆ ತಿದ್ದುಪಡಿ ತರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದಿಂದ ಸಾಗಾಣಿಕೆಯಾಗುತ್ತಿರುವ ಡ್ರಗ್ಸ್‍ಗಳನ್ನು ನಿಯಂತ್ರಿಸಲು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರತಿದಿನ ಸರಕು ಸಾಗಾಣಿಕೆಯ ವಿಭಾಗದಲ್ಲಿ ಶ್ವಾನದಳದ ತನಿಖೆ ಗೊಳಪಡಿಸಲಾಗುತ್ತಿದೆ. ಕಸ್ಟಮ್ ಅಧಿಕಾರಿಗಳ ಸಹಕಾರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕೆ.ಜೆ.ಜಾರ್ಜ್ ಅವರು, ಕೊರೋನ ವೈರಸ್ ಕೆಲಕಾಲ ಇದ್ದು ಹೋಗುತ್ತದೆ. ಆದರೆ ಡ್ರಗ್ಸ್ ಎಂಬ ವೈರಸ್ ಸದಾಕಾಲ ಸಮಾಜವನ್ನು ಕಾಡುತ್ತಿದೆ. ಎರಡುಮೂರು ಕಾನೂನುಗಳನ್ನು ಬಳಕೆ ಮಾಡಿ ಮಾದಕವಸ್ತುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನನ್ನು ಬಲಪಡಿಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿರುವ ಜಾಲವನ್ನು ಬೇಧಿಸಿ ಗುಪ್ತಚರ ಸಿಬ್ಬಂದಿಯನ್ನು ಹೆಚ್ಚಾಗಿ ಬಳಕೆ ಮಾಡಿ ದೇಶದ ವಿದ್ಯಾರ್ಥಿಗಳ ಮೇಲೆ ನಿಗಾ ಇಡಿ, ಮಾದಕ ವಸ್ತು ಚಟಬಿಡಿಸುವ ಅಭಿಯಾನ ಕೈಗೊಳ್ಳಿ ಎಂದು ಸಲಹೆ ನೀಡಿದರು.  ಶಾಸಕ ಎನ್.ಹ್ಯಾರೀಸ್ ಮಾತನಾಡಿ, ಕಾನೂನುಗಳನ್ನು ತಿದ್ದುಪಡಿ ಮಾಡುವಂತೆ ಸಲಹೆ ಮಾಡಿದರು.

Facebook Comments