ಬಸವಕಲ್ಯಾಣ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ರಾಜ್ಯದಲ್ಲಿ ನಡೆಯುತ್ತಿರುವ ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನ ಸಭಾ ಉಪಚುನಾವಣೆಯನ್ನು ಜೆಡಿಎಸ್ ಲಘುವಾಗಿ ಪರಿಗಣಿಸಿಲ್ಲ ಮತ್ತು ಯಾರ ಜತೆಯೂ ಹೊಂದಾಣಿಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಕಲ್ಯಾಣ ಕ್ಷೇತ್ರದಿಂದ ಸಯ್ಯದ್ ಹಸರತ್ ಅಲಿಖಾನ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ.

ಇಂದು ಸಯ್ಯದ್ ಹಸರತ್ ಅಲಿಖಾನ್ ಅವರು ಜೆಡಿಎಸ್ ಸೇರಿದ್ದು, ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ. ನಾಳೆ ಮಸ್ಕಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಲಾಗುವುದು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ 15 ದಿನಗಳಿಂದ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಬಸವ ಕಲ್ಯಾಣದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ.

ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಎಲ್ಲರೂ ಸಂಘಟಿತರಾಗಿ ಹೋರಾಡುತ್ತೇವೆ ಎಂದು ಅವರು ಹೇಳಿದರು. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಬಸವರಾಜ ಹೊರಟ್ಟಿ ಅವರನ್ನು ವಿಧಾನ ಪರಿಷತ್ ಸಭಾಪತಿಯನ್ನಾಗಿ ನೇಮಿಸುವ ಕುರಿತಂತೆ ಮನವಿ ಮಾಡಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಬೆಂಬಲಿಸಿದ್ದರಿಂದ ಹೊರಟ್ಟಿ ಅವರು ಸಭಾಪತಿಗಳಾಗಿದ್ದಾರೆ.

ಆದರೆ, ಇದನ್ನು ಬಿಜೆಪಿ ಜತೆಗಿನ ಮೈತ್ರಿ ಎಂದು ಭಾವಿಸಬಾರದು ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಹಗುರ ಮಾತುಗಳನ್ನಾಡುತ್ತಿದ್ದಾರೆ. ಜನರಲ್ಲಿ ಅನುಮಾನ ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ನಾವು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ಅಂತರದಲ್ಲಿಟ್ಟು ಜಾತ್ಯತೀತ ನಿಲುವಿನಲ್ಲಿ ಜೆಡಿಎಸ್‍ಅನ್ನು ಬಲಗೊಳಿಸುತ್ತೇವೆ. ಯಾರೊಂದಿಗೂ ಹೊಂದಾಣಿಕೆ ಎಂಬ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Facebook Comments