ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ಬೇಡ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.28- ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಚಾಲುಕ್ಯ ವೃತ್ತದ ಬಳಿ ಇರುವ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ಮತ್ತೊಂದು ಬಸವಣ್ಣನವರ ಪ್ರತಿಮೆ ಪ್ರತಿಷ್ಠಾಪಿಸುವುದು ಯಾವುದೇ ಕಾರಣಕ್ಕೂ ಬೇಡ. ವಿಧಾನಸೌಧದ ಬಳಿಯೇ ಈಗಾಗಲೇ ವಿಶ್ವ ಪ್ರಸಿದ್ಧ ಅಶ್ವಾರೂಢ ಕಂಚಿನ ಪ್ರತಿಮೆ ಇದೆ. ವಿಧಾನಸೌಧದ ಆವರಣದಲ್ಲಿ ಈಗ ಮತ್ತೊಂದು ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಕ್ರಮವನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಇದರ ಹಿಂದೆ ರಾಜಕೀಯ ಇದೆ. ಅವರ ಅಧಿಕಾರ ಈಗ ಅಲುಗಾಡುತ್ತಿದೆ. ಹೀಗಾಗಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಬೀದರ್‍ನ ಬಸವಕಲ್ಯಾಣ ಉಪಚುನಾವಣೆ ಸಂದರ್ಭದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿದ್ದರು. ಈಗ ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ರಾಜಕೀಯ ಕಾರಣದ ಬಸವೇಶ್ವರ ಪ್ರತಿಮೆ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಬಸವಣ್ಣನವರು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳಿದ್ದರು. ಆದರೆ, ಅವರ ತತ್ವಾದರ್ಶಗಳಿಗೆ ವಿರುದ್ಧವಾಗಿ ಸ್ಥಾವರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ನಾನು ವಿರೋಧಿಸುತ್ತೇನೆ. ಈಗಾಗಲೇ ವಿಧಾನಸೌಧ ಭ್ರಷ್ಟರ ಸೌಧವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಹೋಗಿ ಸರ್ಕಾರದ ಕೆಲಸ ಲಂಚದ ಕೆಲಸ ಎಂಬ ರೀತಿ ಆಗಿದೆ. ಈ ಮಧ್ಯೆ ಮಹಾಮಹಿಮರಾದ ಬಸವಣ್ಣನವರ ಪ್ರತಿಮೆಯನ್ನು ಅಲ್ಲಿ ನಿರ್ಮಾಣ ಮಾಡುವುದರಿಂದ ಬರುವ ಔಚಿತ್ಯವಾದರೂ ಏನು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Facebook Comments