ಓಡಾಟ ಮುಖ್ಯವೋ, ನರಳಾಟದಿಂದ ತಪ್ಪಿಸಿಕೊಳ್ಳುವುದು ಮುಖ್ಯವೋ ನೀವೇ ನಿರ್ಧರಿಸಿ : ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಲಾಕ್ಡೌನ್ ಸಂದರ್ಭದಲ್ಲಿ ಒಂದು ದಿನ ಹೊರಗೆ ಓಡಾಡುವುದು ಮುಖ್ಯವೋ ? ಅಥವಾ ಕೋವಿಡ್ ನಿಂದ ನರಳಾಡುವುದನ್ನು ತಪ್ಪಿಸುವುದು ಮುಖ್ಯವೋ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಜನಸಾಮಾನ್ಯರ ಕೈಯಲ್ಲಿದೆ. ನೀವೇ ನಿರ್ಧಾರ ಮಾಡಿ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ 160 ಆಕ್ಸಿಜನ್ ಕನ್ಸೆಂಟ್ರೇಟರ್ ಉಪಕರಣಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಳ್ಳುವುದು ಇಷ್ಟೇ. ಕೋವಿಡ್ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಸಲುವಾಗಿ ಲಾಕ್ಡೌನ್ ಜಾರಿಯಾಗಿದೆ. ಹದಿನಾಲ್ಕು ದಿನಗಳ ಕಾಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಅವಧಿಯಲ್ಲಿ ಒಂದು ದಿನ ಓಡಾಡುವುದು ಮುಖ್ಯವೋ ? ಅಥವಾ ಕೋವಿಡ್ ನಿಂದ ನರಳುವುದನ್ನು ತಪ್ಪಿಸುವುದು ಮುಖ್ಯವೋ ಎಂಬುದನ್ನು ನಿರ್ಧರಿಸಿ ಎಂದು ಜನರಿಗೆ ಸಂದೇಶ ನೀಡಿದ ಅವರು ಸ್ವಯಂಪ್ರೇರಣೆಯಿಂದ ಜನ ಸಹಕಾರ ನೀಡಿದರೆ ಮಾತ್ರ ಲಾಕ್ಡೌನ್ ಯಶಸ್ವಿಯಾಗುತ್ತದೆ ಎಂದರು.

ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ತಾಲೂಕುಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಮತ್ತು ಕೋವಿಡ್ ಸೋಂಕಿತರಿಗೆ ಔಷಧಿ ಕಿಟ್ ಗಳನ್ನು ವಿತರಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin