ದಿಶಾ ಪ್ರಕರಣದ ನಂತರ ರಾಜ್ಯದಲ್ಲೂ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.7- ಉತ್ತರ ಪ್ರದೇಶದ ಉನ್ನಾವೋ ಮತ್ತು ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.  ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.

ಯಾವುದೇ ಸಂದರ್ಭದಲ್ಲೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ರಾಜೀ ಮಾಡಿಕೊಳ್ಳಬೇಡಿ. ಸರ್ಕಾರ ಪೊಲೀಸರಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವು, ಸಹಕಾರ, ಸೌಲಭ್ಯಗಳನ್ನು ನೀಡಲು ಸಿದ್ಧವಿದೆ. ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿರಲು ಮಹಿಳೆಯರು, ಮಕ್ಕಳು ಮತ್ತು ಹಿರಿಯ ರಕ್ಷಣೆಗೆ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಉನ್ನಾವೋನಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಸಾವು ಬದುಕಿನ ನಡುವೆ ಹೋರಾಡಿದ ಆಕೆ ನಿನ್ನೆ ಸಾವನ್ನಪ್ಪಿದ್ದಾಳೆ. ಹೈದರಾಬಾದ್‍ನಲ್ಲಿ ಪಶುವೈದ್ಯೆ ದಿಶಾಳ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಮಾಡಿ ಹತ್ಯೆಗೈಯ್ಯಲಾಗಿತ್ತು. ಈ ಆರೋಪಿಗಳನ್ನು ಪೊಲೀಸರು ನಿನ್ನೆ ಎನ್‍ಕೌಂಟರ್‍ನಲ್ಲಿ ಹೊಡೆದು ಹಾಕಿದ್ದಾರೆ.

ಘಟನೆ ಬಗ್ಗೆ ವಿವರಣೆ ನೀಡುವಾಗ ಹೈದರಾಬಾದ್ ಪೊಲೀಸ್ ಕಮೀಷನರ್ ವಿಶ್ವನಾಥ್ ಸಜ್ಜನರ್, ಆರೋಪಿಗಳು ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಲ್ಲಿ ಈ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿರಬಹುದು ಎಂಬ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಕಳೆದ 10 ದಿನದ ಅವಧಿಯಲ್ಲಿ ಕೆಲವು ಅಹಿತಕರ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಹೈದರಾಬಾದ್‍ನ ಹೊರವಲಯದಲ್ಲಿ ಪೊಲೀಸರ ಎನ್‍ಕೌಂಟರ್‍ಗೆ ಬಲಿಯಾದ ನಾಲ್ವರು ಅತ್ಯಾಚಾರಿಗಳು ಕರ್ನಾಟಕದಲ್ಲೂ ಇಂತಹ ಪೈಶಾಚಿಕ ಕೃತ್ಯ ನಡೆಸಿರಬಹುದೆಂದು ಸ್ವತಃ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಬಹಿರಂಗಪಡಿಸಿದ್ದರು.  ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತಿತರ ಭಾಗಗಳಲ್ಲಿ ಇಂತಹ ಪ್ರಕರಣಗಳು ಆಗಾಗ್ಗೆ ಮರುಕಳಿಸುತ್ತಿರುವುದರಿಂದ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಸೂಚನೆ ಕೊಡಲಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಕೆಲವು ಸಾಮಾಜಘಾತುಕ ಶಕ್ತಿಗಳು ಆಗಾಗ್ಗೆ ತಲೆ ಎತ್ತಿರುವುದರಿಂದ ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಗೃಹ ಸಚಿವರು ಮಾರ್ಗದರ್ಶನ ಮಾಡುವರು. ಮುಖ್ಯವಾಗಿ ಕರಾವಳಿತೀರ ಪ್ರದೇಶಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತಿತರ ಭಾಗಗಳಿಂದ ಆಗಮಿಸಿರುವ ಅಕ್ರಮ ವಲಸಿಗರ ಮೇಲೆ ಕಣ್ಣಿಡುವಂತೆಯೂ ಸಲಹೆ ಮಾಡಲಿದ್ದಾರೆ.

ಕರ್ನಾಟಕ ಉಗ್ರರ ಸ್ಲೀಪರ್‍ಸೆಲ್ ಆಗುತ್ತಿದೆ ಎಂದು ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಬಾಂಗ್ಲಾ ಮೂಲದ ಜಮಾತ್-ಉಲ್ ಸಂಘಟನೆಯ ಕೆಲವು ಶಂಕಿತ ಉಗ್ರರನ್ನು ದೊಡ್ಡಬಳ್ಳಾಪುರ ಮತ್ತು ರಾಮನಗರದಲ್ಲಿ ಬಂಧಿಸಲಾಗಿತ್ತು.

ರಾಜ್ಯದಲ್ಲಿ ಯಾವ ಯಾವ ಭಾಗದಲ್ಲಿ ಕಾನೂನು ಬಾಹಿರವಾಗಿ ನುಸುಳುಕೋರರು ಇದ್ದಾರೋ ಅಂಥವರ ಬಗ್ಗೆ ವಿಶೇಷ ನಿಗಾವಹಿಸುವುದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು, ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರೊಂದಿಗೆ ಅಭಿಯಾನ ನಡೆಸುವುದು ಸೇರಿದಂತೆ ನಾನಾ ರೀತಿಯ ಜಾಗೃತ ಕ್ರಮಗಳನ್ನು ಹಮ್ಮಿಕೊಳ್ಳುವಂತೆ ಬಸವರಾಜ್ ಬೊಮ್ಮಾಯಿ ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯಂತಹ ಬೀಭತ್ಸ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಿಎಂ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಸಮಾಜಘಾತುಕ ಶಕ್ತಿಗಳು ತಲೆ ಎತ್ತಬಾರದು. ಎಷ್ಟೇ ಪ್ರಭಾವಿಗಳಾಗಿರಲಿ ಅಥವಾ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರಲಿ ಕಾನೂನಿಗೆ ವಿರುದ್ದವಾಗಿ ವರ್ತಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆಯೂ ಮುಖ್ಯಮಂತ್ರಿಯವರು ಪೊಲೀಸ್ ಮಹಾನಿರ್ದೇಶಕರು ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಪೊಲೀಸ್ ಮಹಾನಿರ್ದೇಶಕರು, ವಲಯ ಐಜಿಪಿಗಳು, ಕಾನೂನು ಮತ್ತು ಸುವ್ಯವಸ್ಥೆ, ಗುಪ್ತಚರ, ಕೆಎಸ್‍ಆರ್‍ಪಿ ಸೇರಿದಂತೆ ಎಲ್ಲ ವಿಭಾಗಗಳ ವಿವಿಧ ಶ್ರೇಣಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Facebook Comments