ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ : ಬೊಮ್ಮಾಯಿ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.19- ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ನಾವು ಮಾಡುತ್ತಿಲ್ಲ. ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ.

ಕಾನೂನು ಕೈಗೆತ್ತಿಕೊಳ್ಳುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜನರನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಅದನ್ನು ನಾವು ನಿಭಾಯಿಸುತ್ತೇವೆ. ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸುವ ಯತ್ನ ಮಾಡಲಾಗುತ್ತಿದೆ. ಇಂತಹ ಸುಳ್ಳುಗಳನ್ನು ನಂಬಿ ಪ್ರತಿಭಟನೆ ಮಾಡಬೇಡಿ ಎಂದು ಗೃಹ ಸಚಿವರು ಮನವಿ ಮಾಡಿದರು.
ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ದಿನಗಳ ಕಾಲ 144ನೆ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದರು.

ಅನ್ಯಾಯವಾಗಲು ಬಿಡುವುದಿಲ್ಲ: ಮಹದಾಯಿ ವಿಚಾರವಾಗಿ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಅದನ್ನು ನಾವು ತೆರವುಗೊಳಿಸುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Facebook Comments