ಸಿಎಂ ಆದ ಮೊದಲ ದಿನವೇ ಮಹತ್ವದ ಘೋಷಣೆ ಮಾಡಿದ ಬಸವರಾಜ್ ಬೊಮ್ಮಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಬಸವರಾಜ ಬೊಮ್ಮಾಯಿ ಮೂರು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು. ದಕ್ಷ, ಪ್ರಾಮಾಣಿಕ, ಜನಪರ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಲಿದ್ದು, ಸರ್ಕಾರದ ಕೆಲಸಗಳು ಕಾಲ ಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸಂಪುಟ ಸಭೆಯ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಪುಟ ಸಭೆ ನಡೆಸಿ ಕೆಲ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದ ದಿಕ್ಸೂಚಿಯನ್ನು ಅವರಿಗೆ ವಿವರಿಸಿದ್ದೇನೆ ಎಂದರು.

ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು 1000ದಿಂದ 1200ರೂ.ಗೆ ಏರಿಕೆ ಮಾಡಲಾಗಿದ್ದು, ಇದಕ್ಕಾಗಿ 862ಕೋಟಿ ರೂ. ಹೆಚ್ಚುವರಿಯಾಗಿ ಮೀಸಲಿಡಲಾಗುವುದು ಎಂದರು. ವಿಧವಾ ವೇತನವನ್ನು 600ರಿಂದ 800 ರೂ.ಗೆ ಏರಿಕೆ ಮಾಡಲಾಗುವುದು.ಇದರಿಂದ 414 ಕೋಟಿ ರೂ. ಹೆಚ್ಚು ಮೀಸಲಿಡಬೇಕಾಗುತ್ತದೆ. ವಿಶೇಷ ಚೇತನ ಮಕ್ಕಳ ಶಿಷ್ಯ ವೇತನನ್ನು 600ರಿಂದ 800 ರೂ.ಗೆ ಏರಿಸಲಾಗುವುದು. ಇದರಿಂದ 3.66 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಅಲ್ಲದೇ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ಶಿಷ್ಯ ವೇತನ ಸೇರಿದಂತೆ ಉನ್ನತ ಶಿಕ್ಷಣಕ್ಕಾಗಿ ಹೆಚ್ಚುವರಿಯಾಗಿ 1000 ಕೋಟಿ ರೂ. ಮೀಸಲಿಡಲಾಗುವುದು ಎಂದು ಅವರು ಹೇಳಿದರು.

ಸರ್ಕಾರದ ಸೌಲಭ್ಯಗಳು ಕಟ್ಟ ಕಡೆಯ ಸ್ತರದ ಜನರಿಗೂ ತಲುಪುವಂತಾಗಬೇಕು. ಈಗ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಸಚಿವ ಸಂಪುಟ ರಚನೆಯಾದ ನಂತರ ಆಡಳಿತಕ್ಕೆ ಮತ್ತಷ್ಟು ಚುರುಕು ಸಿಗಲಿದೆ. ಅನಗತ್ಯ ವೆಚ್ಚಗಳನ್ನು ಕನಿಷ್ಠ ಶೇ.5ರಷ್ಟು ಕಡಿಮೆ ಮಾಡಬೇಕು. ಇಲಾಖೆಗಳ ಪೂರ್ಣ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಜನಪರವಾದ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಏನೇ ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಬೇಡ. ಅದಕ್ಕೆ ನಾನು ಸಮ್ಮತಿಸುವುದಿಲ್ಲ. ಪ್ರಮುಖ ಕಡತಗಳು 15 ದಿನಗಳೊಳಗಾಗಿ ವಿಲೇವಾರಿಗಬೇಕು. ರೈತರ ಮಕ್ಕಳು ಉನ್ನತ ಶಿಕ್ಷಣದಲ್ಲಿ ವಂಚಿತರಾಗಬಾರದು. ಅವರಿಗಾಗಿ ಶಿಷ್ಯ ವೇತನ ಯೋಜನೆ ಜಾರಿಗೆ ತರಲಾಗುವುದು. ಇದಕ್ಕಾಗಿ 1 ಸಾವಿರ ಕೋಟಿ ಮೀಸಲಿಡಲಾಗುವುದು ಎಂದರು.

Facebook Comments

Sri Raghav

Admin