ದೇವೇಗೌಡರು-ಸಿದ್ದರಾಮಯ್ಯರ ಜಾತಕ ಹೊಂದಾಣಿಕೆಯಾಗಿದೆ, ಬೊಮ್ಮಾಯಿ ಹೀಗೆ ಹೇಳಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಬೆಂಗಳೂರು, ಜು.6-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಕ ಹೊಂದಾಣಿಕೆಯಾಗಿರುವಂತೆ ಅನ್ನಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ದೇವೇಗೌಡರು ಒಟ್ಟಿಗೆ ಇದ್ದಾಗ ಅಧಿಕಾರಕ್ಕೆ ಬಂದಿದ್ದಾರೆ. ದೂರ ಸರಿದಾಗ ಅಧಿಕಾರ ಹೋಗಿದೆ. ದೇವೇಗೌಡರಿಂದ ಸಿದ್ದರಾಮಯ್ಯಗೆ ಅಧಿಕಾರವೋ, ಸಿದ್ದರಾಮಯ್ಯ ಅವರಿಂದ ದೇವೇಗೌಡರಿಗೆ ಅಧಿಕಾರವೋ ಗೊತ್ತಾಗುತ್ತಿಲ್ಲ ಎಂದರು.

ದೇವೇಗೌಡರು ತಮ್ಮನ್ನು (ಬಸವರಾಜಬೊಮ್ಮಾಯಿ), ತಮ್ಮ ತಂದೆಯವರನ್ನು ಉದ್ದೇಶಿಸಿ, ನೀವು ಜಾತಕ ನಂಬುವುದಿಲ್ಲ. ತಮ್ಮ (ಬಸವರಾಜಬೊಮ್ಮಾಯಿ) ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಜಾತಕ ಹೊಂದುತ್ತದೆ ಎಂದು ಹೇಳಿದರು. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರ ಜಾತಕ ಹೊಂದುವುದಿಲ್ಲ ಎಂದು ಹೇಳಿದ್ದರು ಎಂದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ರೇವಣ್ಣ ಮತ್ತು ದೇವೇಗೌಡರ ಜಾತಕ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದೀರಿ. ಎರಡು ಮದಗಜಗಳು ಒಂದೆಡೆ ಇರಲು ಸಾಧ್ಯವಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಜಾತಕ ಕೂಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಮಾತು ಮುಂದುವರೆಸಿದ ಬೊಮ್ಮಾಯಿ, ಡಿ.ಕೆ.ಶಿವಕುಮಾರ್ ಅವರದು ರಾಜಕಾರಣದಲ್ಲಿ ವರ್ಣರಂಜಿತ ವ್ಯಕ್ತಿತ್ವ, ತಮಿಳುನಾಡಿನಿಂದ ನೊಣವಿನಕೆರೆವರೆಗೂ ಜಾತಕ ಹೇಳುವವರ ದೊಡ್ಡ ಲಾಬಿಯೇ ಇದೆ ಎಂದು ಹೇಳಿದರು. ಈವತ್ತಿನ ರಾಜಕಾರಣ ವೈಯಕ್ತಿಕ ಸಂಬಂಧದ ಮೇಲೆ ಅವಲಂಬಿತವಾಗಿದೆ. ರಾಜ್ಯದ ರಾಜಕಾರಣ ಕೆಲವು ವ್ಯಕ್ತಿಗಳಿಗೆ ಸೀಮಿತವಾಗಿದೆ. ಸಾಮಾನ್ಯ ಕನ್ನಡಿಗನಿಗೆ ಏನು ಲಾಭವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 1984ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು. ಅದೇ ರೀತಿ ಇಂದು ಕುಮಾರಸ್ವಾಮಿ ಅವರು ರಾಜಕೀಯ ಗಟ್ಟಿತವನ್ನು ಪ್ರದರ್ಶನ ಮಾಡುತ್ತಾರೆಯೇ ಎಂದು ಬೊಮ್ಮಾಯಿ ಪ್ರಶ್ನಿಸಿದರು.  ಆಗ ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷರು, ಅಂದು ಹೆಗಡೆ ಅವರೊಂದಿಗೆ ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಇದ್ದರು. ಈಗ ನೀವಿದ್ದೀರಿ. ಇಬ್ಬರೂ ಜತೆಗೂಡಿ ಎಂದಾಗ, ಇಲ್ಲ ಅವರು ಚೆನ್ನಾಗಿರಲಿ, ನಮ್ಮದೇನು ತಕರಾರು ಇಲ್ಲ ಎಂದು ಬೊಮ್ಮಾಯಿ ಮಾತು ಮುಂದುವರೆಸಿದರು.

# ಗೊಂದಲದ ಸರ್ಕಾರದಲ್ಲಿ ಗೊಂದಲದ ಬಜೆಟ್:
ಸರ್ಕಾರವೂ ಗೊಂದಲದಲ್ಲಿದೆ. ಗೊಂದಲದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದಾರೆ. ಒಳ್ಳೆಯ ಆಡಳಿತ, ಕೆಟ್ಟ ರಾಜಕಾರಣದ ಫಲಿತಾಂಶ ಶೂನ್ಯವಾಗಲಿದೆ. ಒಳ್ಳೆಯ ಆಡಳಿತ, ಒಳ್ಳೆಯ ರಾಜಕಾರಣ ನೂರರಷ್ಟು ಫಲಿತಾಂಶ ನೀಡುತ್ತದೆ. ಮುಖ್ಯಮಂತ್ರಿ ಯಾವ ರೀತಿ ಆಡಳಿತ ಮತ್ತು ರಾಜಕಾರಣ ಕೊಡುತ್ತಾರೆ ಎಂದ ಬೊಮ್ಮಾಯಿ, ಇದು ಸಿಎಂ ಪಾಲಿಗೆ ಪರೀಕ್ಷೆಯಾಗಲಿದೆ ಎಂದರು.

ರಾಜ್ಯಪಾಲರ ಭಾಷಣ ಸಂಪೂರ್ಣ ತಿರುಳಿಲ್ಲದ, ದಿಕ್ಕು-ದೆಸೆಯಿಲ್ಲದ ಭಾಷಣವಾಗಿದೆ. ದಿಕ್ಸೂಚಿ ಇಲ್ಲದ ಅನುಮಾನಾಸ್ಪದ ನೆಲೆಯಲ್ಲಿ ಮಾಡಿಸಿದ ಭಾಷಣವಾಗಿದೆ. ಸಾಂದರ್ಭಿಕ ಶಿಶುವೋ, ಯಾವ ಸನ್ನಿವೇಶದ ಶಿಶುವೋ, ಮುಂದೆ ಯಾವ ರೀತಿ ಬೆಳೆಯುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದರು.
ರೈತರ ಸಾಲ ಮನ್ನಾ ಮಾಡುವುದರಿಂದ ಅವರನ್ನು ಋಣಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ. ಶೇ.80ರಷ್ಟು ಒಣ ಬೇಸಾಯವಿದೆ. ಅದಕ್ಕೆ ಪರಿಹಾರ ಬೇಕು ಎಂದು ಹೇಳಿದರು.

Facebook Comments

Sri Raghav

Admin