ಮೂರ್ನಾಲ್ಕು ದಿನದಲ್ಲಿ ನೂತನ ಸಿಎಂ ಆಯ್ಕೆ : ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮೂರ್ನಾಲ್ಕು ದಿನದಲ್ಲಿ ಒಂದು ಹಂತಕ್ಕೆ ಬರಬಹುದು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ಪಕ್ಷದ ಉನ್ನತ ಮಟ್ಟದ ಸಭೆಗಳು ನಡೆದಿದ್ದು, ಯಾವ ತೀರ್ಮಾನವಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದರು.

ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಶಾಸಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ರಾಜ್ಯ ಕೋರ್‍ಕಮಿಟಿ, ಕೇಂದ್ರ ಕೋರ್‍ಕಮಿಟಿ ಸಭೆಯಲ್ಲೂ ಚರ್ಚೆಯಾಗಿ ಆನಂತರ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರವಾಗುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವುದರಿಂದ ನೂತನ ನಾಯಕರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.

ನಮ್ಮ ಮನೆಗೆ ಶಾಸಕರು ಬರುವುದು ಹೊಸದಲ್ಲ. ಮೊದಲಿನಿಂದಲೂ ಶಾಸಕರು ಬರುತ್ತಿದ್ದಾರೆ. ಮುಖ್ಯಮಂತ್ರಿಯಾಗುವವರ ಹೆಸರುಗಳಲ್ಲಿ ಮಾಧ್ಯಮದವರು ನನ್ನ ಹೆಸರು ಸೇರ್ಪಡೆ ಮಾಡಿರುವುದನ್ನು ನೋಡಿದ್ದೇನೆ. ರಾಜಕೀಯ ವಿಶ್ಲೇಷಣೆ ಹಲವು ರೀತಿಯಲ್ಲಿ ಆಗುತ್ತಿದೆ. ವರಿಷ್ಠರು ಹಾಗೂ ಪಕ್ಷ ತೆಗೆದುಕೊಳ್ಳುವ ನಿರ್ಧಾರವೇ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ನೂತನ ಸಿಎಂ ಆಯ್ಕೆಯಾಗುವ ಮುನ್ನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿರುವುದು ಅವರ ಮನಸ್ಥಿತಿಯನ್ನು ತೋರುತ್ತದೆ. ಜನರಲ್ಲಿ ಎಂತಹ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದವರು ಮಾತನಾಡುವಂತದ್ದಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಆಗ ಪರ್ಸೆಂಟೇಜ್ ಸರ್ಕಾರವೆಂಬ ಆರೋಪಕ್ಕೆ ಗುರಿಯಾಗಿತ್ತು. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಟೀಕಿಸಿದರು.

Facebook Comments