ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ : ಹೊರಟ್ಟಿಗೆ ಸಭಾಪತಿ ಸ್ಥಾನ ಖಚಿತ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.27-ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಾವು-ಮುಂಗುಸಿಯಂತಿದ್ದ ಬಿಜೆಪಿ, ಜೆಡಿಎಸ್ ಮತ್ತೆ ಮರು ಮೈತ್ರಿಯಾಗಲು ವೇದಿಕೆ ಸಜ್ಜಾಗಿದೆ.  ವಿಧಾನಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿಯು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಯಾವುದೇ ಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ತೆರವಾಗಲಿರುವ ಸಭಾಪತಿ ಸ್ಥಾನವು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದೆ. ಈ ಪ್ರಕಾರವಾಗಿ ಸದನದ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ವಿಧಾನಪರಿಷತ್‍ನ ನೂತನ ಸಭಾಪತಿ ಯಾಗುವುದು ಬಹುತೇಕ ಖಚಿತವಾಗಿದೆ.

ಉಪಸಭಾಪತಿ ಸ್ಥಾನವು ಬಿಜೆಪಿಗೆ ಸಿಗಲಿದ್ದು, ಸದಸ್ಯರಾದ ಶಶಿಲ್ ನಮೋಶಿ, ಅರುಣ್ ಶಹಾಪುರ್, ಮಹಾಂತೇಶ್ ಕವಟಗಿಮಠ ಹೆಸರುಗಳು ಮುಂಚೂಣಿಯಲ್ಲಿವೆ.
ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಧಾನಪರಿಷತ್ ಸದಸ್ಯರ ಸಭೆ ಕರೆದಿದ್ದು, ಉಪಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯನ್ನು ಬಹುತೇಕ ಅಂತಿಮಗೊಳಿಸಲಿದ್ದಾರೆ.

ಇಂದು ಬೆಳಗ್ಗೆ ಕಾವೇರಿಗೆ ಭೇಟಿ ನೀಡಿದ್ದ ಬಸವರಾಜ್ ಹೊರಟ್ಟಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸೂಚನೆ ಮೇರೆಗೆ ಸಿಎಂ ಅವರನ್ನು ಭೇಟಿಯಾದ ಹೊರಟ್ಟಿ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದ್ದಾರೆ.

ಪಕ್ಷದ ಮುಖಂಡರು ಹಾಗೂ ಪರಿಷತ್ ಸದಸ್ಯರ ಜೊತೆ ಸಂಜೆ ಚರ್ಚೆ ನಡೆಸಿ ತಮ್ಮ ನಿಲುವು ತಿಳಿಸುತ್ತೇನೆ ಎಂದು ಯಡಿಯೂರಪ್ಪ ಹೊರಟ್ಟಿಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಇದೇ 29ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈಗಾಗಲೇ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ನಮಗೆ ಸಭಾಪತಿ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾಗಿ ಹೇಳಿದರು.

ಈವರೆಗೂ ಬಿಎಸ್‍ವೈ ಅವರಿಂದ ಯಾವುದೇ ರೀತಿಯ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಅವರು ಏನೇನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ನಮಗೆ ಸಭಾಪತಿ ಸ್ಥಾನವನ್ನು ನೀಡಬೇಕೆಂದು ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗಿದೆ. ಸಂಜೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದರು.

ಸಭಾಪತಿ ಸ್ಥಾನವನ್ನು ನಮಗೆ ನೀಡಿದರೆ ಉಪ ಸಭಾಪತಿ ಚುನಾವಣೆಯಲ್ಲಿ ನಾವು ಬಿಜೆಪಿಗೆ ಬೆಂಬಲ ಕೊಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೊತೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಕೆಲವು ತೀರ್ಮಾನಗಳನ್ನು ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ ಬಳಿಕವೇ ತೀರ್ಮಾನಿಸಬೇಕಾಗುತ್ತದೆ. ಸಂಜೆ ಅಥವಾ ನಾಳೆ ಎಲ್ಲವೂ ಗೊತ್ತಾಲಿದೆ ಎಂದು ತಿಳಿಸಿದರು.

ವಿಧಾನಪರಿಷತ್‍ನ ಒಟ್ಟು 75 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 33, ಕಾಂಗ್ರೆಸ್ 27, ಜೆಡಿಎಸ್ 13, ಒಬ್ಬ ಪಕ್ಷೇತರ ಹಾಗೂ ಓರ್ವ ಸಭಾಪತಿ ಇದ್ದಾರೆ. ಯಾವುದೇ ಪಕ್ಷ ಸಭಾಪತಿ ಸ್ಥಾನವನ್ನು ಅಲಂಕರಿಸಬೇಕಾದರೆ 38 ಸ್ಥಾನಗಳನ್ನು ಪಡೆಯಬೇಕು. ಈಗಿರುವ ಲೆಕ್ಕಾಚಾರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದೆ.

Facebook Comments