ವಿಧಾನಪರಿಷತ್ ಪರಿಸ್ಥಿತಿಗೆ ಹೊರಟ್ಟಿ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.30-ಕಲಾವಿದರು, ಕ್ರೀಡಾಪಟುಗಳು, ಪತ್ರಕರ್ತರು ವಿಧಾನಪರಿಷತ್‍ಗೆ ನೇಮಕವಾಗುತ್ತಿದ್ದರು. ಆದರೆ, ಇತ್ತೀಚೆಗೆ ವಿಧಾನ ಸಭೆಯಲ್ಲಿ ಸೋತವರು ವಿವಿಧ ಕೋಟಾದಡಿ ನೇಮಕವಾಗುತ್ತಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜಹೊರಟ್ಟಿ ತಿಳಿಸಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಹಕಾರ ಸಂಘದ ಸಹಯೋಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಾಯಕ ವರ್ಷಾಚರಣೆಯ ಅಂಗವಾಗಿ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಕುರಿತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಭಾಪತಿಯನ್ನು ಪ್ರಶ್ನೆ ಮಾಡುವ ಸದಸ್ಯರು ಇದ್ದಾರೆ. ಚಿಗರೆ (ಚಿಂಕೆ) ಹಿಂದೆ 20 ನಾಯಿ ಹೊರಟಂತಾಗಿದೆ ವಿಧಾನಪರಿಷತ್‍ನ ಪರಿಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಪರಿಷತ್‍ನ ಸದಸ್ಯರೊಬ್ಬರು ಗ್ರಾಮೀಣಾ ಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ 14 ಲಕ್ಷ ರೂ. ಖರ್ಚಾಗಿದೆ. ಒಂದೊ ಂದು ಪ್ರಶ್ನೆಗೆ 5ರಿಂದ 8ಸಾವಿರ ರೂ. ಖರ್ಚಾಗುತ್ತದೆ. ಹೀಗಾಗಿ ಸದನದ ಕಾರ್ಯ ಕಲಾಪಗಳ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಕೆಲವು ಕನ್ನಡ ಕಲಾವಿದರು ಇಂಗ್ಲಿಷ್‍ನಲ್ಲಿ ಮಾತನಾಡುತ್ತಾರೆ. ಅಲ್ಲದೆ ಕನ್ನಡ ಧಾರಾವಾಹಿ ಸಂಭಾಷಣೆಯಲ್ಲಿ ಇಂಗ್ಲಿಷ್ ಬಳಕೆಯಾಗುತ್ತಿರು ವುದು ಬೇಸರ ತಂದಿದೆ ಎಂದರು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶೇ.23ರಷ್ಟು ಕನ್ನಡಿಗರು ಇದ್ದರೂ ಕನ್ನಡ ಬಳಸುವವರ ಸಂಖ್ಯೆ ಶೇ.21ರಷ್ಟಿದೆ. ಅತಿಯಾದ ಹೃದಯ ಶ್ರೀಮಂತಿಕೆ ನಮಗೆ ಮಾರಕವಾಗಿದೆ. ಗಡಿ ಜಿಲ್ಲೆಗಳಲ್ಲಿ ಅನ್ಯ ಭಾಷೆಗಳ ಪ್ರಭಾವ ಹೆಚ್ಚಾಗಿದೆ. ಕನ್ನಡ ಭಾಷೆ ನಿರಂತರವಾಗಿ ಕಲಿಕೆ, ಬಳಕೆಯಾಗಬೇಕು. ಸರಿಯಾದ ರೀತಿಯಲ್ಲಿ ಕನ್ನಡವನ್ನು ಬಳಸಬೇಕು.

ಸಹಜವಾಗಿ ಮಾತನಾಡುವ ಭಾಷೆ ಕೆಟ್ಟದ್ದಲ್ಲ. ನಾಮಫಲಕಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಮೊದಲು ಕನ್ನಡದಲ್ಲಿ ಬರೆಯಬೇಕು. ಕನ್ನಡ ಭಾಷೆ ಅನುಷ್ಠಾನಕ್ಕೆ ಬೇಕಾದ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, 2014ರಲ್ಲಿ ನೇಮಕವಾದ ಬ್ಯಾಂಕ್ ಉದ್ಯೋಗಿಗಳು ಆರು ತಿಂಗಳಲ್ಲಿ ಕನ್ನಡ ಕಲಿಯಬೇಕು. ಆದರೆ ಇದುವರೆಗೂ ಕನ್ನಡ ಕಲಿಯದ ಉದ್ಯೋಗಿಗಳ ಮಾಹಿತಿ ನೀಡುವಂತೆ ಕೇಳಿದ್ದೇನೆ. ಆ ಮಾಹಿತಿಯನ್ನು ಆರು ವರ್ಷ ಕಳೆದಿದ್ದರೂ ಬ್ಯಾಂಕ್‍ಗಳು ಕನ್ನಡ ಕಲಿಯದ ಉದ್ಯೋಗಿಗಳ ಪಟ್ಟಿ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ಅಭಿಯಾನ ದಿಂದಾಗಿ ಎಟಿಎಂಗಳಲ್ಲಿ ಕನ್ನಡ ಕಾಣುವಂತಾಗಿದೆ. ಜಾಹೀರಾತಿನಲ್ಲಿ ಶೇ.50ರಷ್ಟು ಕನ್ನಡ ಬಳಕೆಯಾ ಗಬೇಕು ಎಂಬ ಮಸೂದೆ ಸಿದ್ದವಾಗುತ್ತಿದೆ. ಅದು ಕಾಯ್ದೆಯಾಗಿ ಬಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಮಫಲಕದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ. ಶುದ್ಧ ನಾಮಫಲಕ ಅಭಿಯಾನ, ಶಕ್ತಿ ಕೇಂದ್ರ, ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಅಭಿಯಾನ ನಡೆಸಲಾಗಿದೆ. ರಾಜ್ಯದ ನಾಲ್ಕೂ ವಲಯಗಳಲ್ಲಿ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ವಕೀಲರು ಹಾಗೂ ನ್ಯಾಯಾಲಯದ ಉದ್ಯೋಗಿಗಳಿಗೆ ಕಾರ್ಯಾಗಾರ ನಡೆಸಲಾಗುವುದು. ಮಾಧ್ಯಮಗಳಲ್ಲಿ ಕನ್ನಡ ಭಾಷಾ ಬಳಕೆ ಸುಸೂತ್ರವಾಗಿಬೇಕು ಎಂದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಪೂರ್ಣವಾಗಿ ಕನ್ನಡ ಮಯವಾಗಬೇಕು. ಇದಕ್ಕೆ ಹೆಚ್ಚು ಒತ್ತು ಕೊಟ್ಟು ಹೆಚ್ಚು ಹೆಚ್ಚು ಕನ್ನಡ ಬಳಸಲು ಆಧ್ಯತೆ ನೀಡಬೇಕು. ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ಹೇಳಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಬೆಂಗಳೂರು ಜಿಲ್ಲಾಧ್ಯಕ್ಷ ಸೋಮಶೇಖರಗಾಂಧಿ, ಕನ್ನಡ ಅಭಿವೃದ್ಧಿ ಪ್ರಾಧಿಕರದ ನಾಮನಿರ್ದೇಶಿತ ಸದಸ್ಯ ಡಾ.ಕಿಶೋರ್ ಉಪಸ್ಥಿತರಿದ್ದರು.

Facebook Comments