‘ಅಧಿವೇಶನದಲ್ಲಿ ಪರಿಷತ್ ಸದಸ್ಯರು ಕಡ್ಡಾಯವಾಗಿ ಈ 11 ಅಂಶಗಳನ್ನು ಪಾಲಿಸಲೇಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

basavaraja-horatti

ಬೆಂಗಳೂರು, ನ.19- ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮುನ್ನ ವಿಧಾನಪರಿಷತ್ ಸದಸ್ಯರಿಗೆ ಸದನದಲ್ಲಿ ಪಾಲಿಸಬೇಕಾದ 11 ಪ್ರಮುಖ ಅಂಶಗಳ ಬಗ್ಗೆ ಸಭಾಪತಿ ಬಸವರಾಜಹೊರಟ್ಟಿ ಮಾಹಿತಿ ನೀಡಿದ್ದು, ಅವುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ತಿಳಿಸಿದ್ದಾರೆ.

ಸದನವನ್ನು ಪ್ರವೇಶಿಸುವಾಗ ಅಥವಾ ಅಲ್ಲಿಂದ ನಿರ್ಗಮಿಸುವಾಗ ಮತ್ತು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಾಗ ಸಭಾಪತಿ ಪೀಠಕ್ಕೆ ವಂದಿಸಬೇಕು, ಸದನದ ಕಾರ್ಯಕಲಾಪಕ್ಕೆ ಸಂಬಂಧಿಸಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಪುಸ್ತಕ, ವಾರ್ತಾ ಪತ್ರಿಕೆ ಅಥವಾ ಕಾಗದ ಪತ್ರಗಳನ್ನು ಓದುವಂತಿಲ್ಲ, ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಸದಸ್ಯರು ತಮ್ಮ ತಮ್ಮ ಸ್ಥಾನದಲ್ಲಿರಬೇಕು.

ಕಾರ್ಯಕಲಾಪಗಳಿಗೆ ತಡೆ ಅಥವಾ ವಿಘ್ನವನ್ನು ಮಾಡುವಂತಿಲ್ಲ ಹಾಗೂ ಸದನದಲ್ಲಿ ಘೋಷಣೆಗಳನ್ನು ಕೂಗುವಂತಿಲ್ಲ, ಸದನದ ಸಭಾಪತಿ ಅವರ ಪೀಠದ ಬಳಿ ಖುದ್ದಾಗಿ ಹೋಗುವಂತಿಲ್ಲ. ಅಗತ್ಯವಿದ್ದರೆ ಸದನದ ಅಧಿಕಾರಿಗಳ ಮೂಲಕ ಚೀಟಿ ಕಳುಹಿಸಬೇಕು, ಸದನದ ವ್ಯವಹಾರಗಳಿಗೆ ಸಂಬಂಧಪಡದ ಯಾವುದೇ ಬರವಣಿಗೆ, ಪ್ರಶ್ನಾವಳಿ, ಕರಪತ್ರಗಳು ಇತ್ಯಾದಿಗಳನ್ನು ಆವರಣದ ಒಳಗೆ ಹಂಚುವಂತಿಲ್ಲ.

ಸದನದಲ್ಲಿ ಪ್ರತಿಭಟನೆ ಸೂಚಿಸಿ ಕಾಗದ ಪತ್ರಗಳನ್ನು ಹರಿದು ಹಾಕುವಂತಿಲ್ಲ, ಸಭಾಪತಿಯವರು ಪರಿಷತ್ತನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಅಥವಾ ನಿಂತಿರುವಾಗ ಯಾರೂ ಸಹ ತಮ್ಮ ಸ್ಥಾನದಿಂದ ಎದ್ದು ಹೋಗುವಂತಿಲ್ಲ.

ಪ್ರಶ್ನೋತ್ತರ ವೇಳೆಯ ನಿಗದಿತ ಅವಧಿ ನೋಡಿಕೊಳ್ಳಬೇಕು- ಈ ಪ್ರಮುಖ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಸಭಾಪತಿಗಳು, ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸದಸ್ಯರಲ್ಲಿ ಮನವಿ ಮಾಡಿದ್ದಾರೆ. ಸದನದಲ್ಲಿ ತಮಗೆ ದೊರಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಪೂರಕವಾಗುವಂತಹ ವಿಷಯಗಳ ಚರ್ಚೆಗೆ ಹೆಚ್ಚು ಆದ್ಯತೆ ನೀಡುವಂತೆ ಅವರು ಕೋರಿದ್ದಾರೆ.

Facebook Comments

Sri Raghav

Admin