‘ರಾಜೀನಾಮೆ ಕೊಡುವ ಶಾಸಕರಿಗೆ ಜನರೇ ಪಾಠ ಕಲಿಸಲಿ’

ಈ ಸುದ್ದಿಯನ್ನು ಶೇರ್ ಮಾಡಿ

basavaraj horattiಧಾರವಾಡ, ಜ.16-ರಾಜ್ಯದಲ್ಲಿ ಯಾವ ಶಾಸಕರು ರಾಜೀನಾಮೆ ಕೊಡಲು ಸಿದ್ಧರಾಗಿ ದ್ದಾರೋ ಅಂತಹ ಶಾಸಕರಿಗೆ ಕ್ಷೇತ್ರದಲ್ಲಿ ಅವರು ಬರದಂತೆ ಅಲ್ಲಿಯ ಜನರೇ ನೋಡಿಕೊಂಡು ತಕ್ಕಪಾಠ ಕಲಿಸಬೇಕೆಂದು ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಇಂದಿಲ್ಲಿ ಕಿಡಿಕಾರಿದರು.

ನಗರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಂಕರ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಕೆಲಸ ಮಾಡಿಕೊಳ್ಳಬಹುದಿತ್ತು.

ಈಗ ಸಚಿವರಾಗಿಲ್ಲವೆನ್ನುವ ಕಾರಣಕ್ಕೆ ತಮ್ಮ ಕ್ಷೇತ್ರದ ಕೆಲಸವಾಗುತ್ತಿಲ್ಲ ಎಂದು ಹೇಳಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿದ್ದಾರೆ. ಇದು ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದರು.

ಬಿಜೆಪಿ ಒತ್ತಡಕ್ಕೆ ಮಣಿದು ಬೆಂಬಲ ವಾಪಸ್ ತೆಗೆದುಕೊಂಡಿದ್ದಾರೆ. 12 ಜನ ರಾಜೀನಾಮೆ ಕೊಡುವ ತಾಕತ್ತು ಯಾರು ಮಾಡುವುದಿಲ್ಲ. ಇದೆಲ್ಲ ಮೇಲಾಟ, ರಾಜೀನಾಮೆ ಕೊಡುವವರು ಯಾವ ಪುರಷಾರ್ಥಕ್ಕಾಗಿ ರಾಜೀನಾಮೆ ಕೊಡಬೇಕೆಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಕೂಡ ಸಮ್ಮಿಶ್ರ ಸರ್ಕಾರ ದಲ್ಲಿಯೇ ಅಧಿಕಾರ ನಡೆಸುತ್ತಿದ್ದಾರೆ.

ಅವರ ಹಿಂದೆಯೂ ಅನೇಕ ಪಕ್ಷಗಳಿವೆ ಎನ್ನುವುದನ್ನು ಬಿಜೆಪಿ ಅರಿಯಬೇಕು, ಈಗ ನಡೆಯುತ್ತಿರುವುದು ರಾಜ್ಯದ ಜನರಿಗೆ ಕೆಟ್ಟ ಸಂದೇಶ ಕೊಡುವಂತಾಗಿದೆ. ಅಷ್ಟಕ್ಕೂ ಬಿಜೆಪಿಗೆ ಈಗ ಅಧಿಕಾರ ಏತಕ್ಕೆ ಬೇಕು ವಿರೋಧ ಪಕ್ಷದಲ್ಲಿದ್ದು ಚೆನ್ನಾಗಿ ಕೆಲಸ ಮಾಡಿ, ಮುಂದೆ ಅಧಿಕಾರಕ್ಕೆ ಬರಬಹುದು. ಈಗ ಇಂತಹ ಗೊಂದಲ ಸೃಷ್ಟಿ ಮಾಡಿ ಆರೂವರೆ ಕೋಟಿ ಜನರ ತಲೆ ಮೇಲೆ ಭಾರ ಹಾಕುವುದು ಸರಿಯಲ್ಲ ಎಂದರು.

ಇದರ ಹಿಂದೆ ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆಗಳಿವೆ. ಕುಮಾರಸ್ವಾಮಿ ಏನಾದರೂ ಬಹುಮತ ಸಾಬೀತು ಮಾಡುತ್ತೇನೆ ಎಂದರೆ ಇವರೇನು ಮಾಡುತ್ತಾರೆ, ಯಾರು ಯಾವುದೇ ಪಕ್ಷವನ್ನು ಬಿಟ್ಟು ಹೋಗಬಾರದು ಪುನಃ ಅತಂತ್ರವಾಗಬಾರದು. ಇದರಿಂದ ಜನರಿಗೆ ಏನು ಉಪಯೋಗವಾಗುತ್ತದೆ. ಸಾಧ್ಯವಾದಷ್ಟು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತೇವೆ. ಸರ್ಕಾರ ಸ್ಥಿರವಾಗಿದ್ದು ಸಾಕಷ್ಟು ಅಭಿವೃದ್ದಿ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದೆ ಇದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲವೆಂದು ಟೀಕಿಸಿದರು.

Facebook Comments