“ಅನ್ಯಾಯವಾಗಿದೆ ಎಂದಿದ್ದೆ ದೊಡ್ಡ ತಪ್ಪಾಯ್ತ” : ದಳಪತಿಗಳ ವಿರುದ್ಧ ಹೊರಟ್ಟಿ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23- ಉದ್ದೇಶ ಪೂರ್ವಕವಾಗಿ ಸಭಾಪತಿ ಸ್ಥಾನವನ್ನು ತಪ್ಪಿಸಲಾಯಿತು ಎಂದು ಜೆಡಿಎಸ್‍ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನಿಷ್ಟೆಯಿಂದ ದುಡಿದರೂ ನನಗೆ ಅವಕಾಶ ಸಿಗಲಿಲ್ಲ. ಸಚಿವ ಸ್ಥಾನಕ್ಕೂ ನನ್ನನ್ನು ಪರಿಗಣಿಸಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸಮ್ಮಿ ಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರು ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಸಿದ್ದರಿದ್ದರು. ಆಗ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರೇ ನನಗೆ ಈ ವಿಷಯ ಹೇಳಿದ್ದರು. ಬೆಳಗಾವಿ ಅಧಿವೇಶನದ ವೇಳೆ ರಾತ್ರಿ 11 ಗಂಟೆಗೆ ದೇವೇಗೌಡರು ಕರೆ ಮಾಡಿ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಹೇಳಿದ್ದರು. ಬೆಳಗಾಗುವಹೊತ್ತಿಗೆ ಕುಮಾರಸ್ವಾಮಿ ಬೇಡ ಎಂದಿದ್ದರು.

ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಸಭಾಪತಿ ಸ್ಥಾನ ಹೊರಟ್ಟಿ ಅವರಿಗೆ ಎಂದು ತೀರ್ಮಾನ ಮಾಡಲಾಗಿತ್ತು. ಯಾರದೋ ಮಾತು ಕೇಳಿಕೊಂಡು ಬೇಕೆಂದೇ ನನಗೆ ಸ್ಥಾನ ತಪ್ಪಿಸಲಾಯಿತು. ಭೋಜೇಗೌಡರ ಸಹೋದರ ಧರ್ಮೇಗೌಡರಿಗೆ ಉಪ ಸಭಾಪತಿ ಸ್ಥಾನ ಕೊಡಿಸಲು ನನಗೆ ಅನ್ಯಾಯ ಮಾಡಲಾಯಿತು ಎಂದರು.

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ನಾನು ಹೇಳಿಕೆ ಕೊಟ್ಟಿದ್ದೆ. ಅದನ್ನೇ ದೊಡ್ಡ ತಪ್ಪು ಎಂಬಂತೆ ಕುಮಾರಸ್ವಾಮಿ ಖಾರವಾಗಿ ಮಾತನಾಡಿದರು. ಪಕ್ಷದಲ್ಲಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಎಲ್ಲಾ ನೋವನ್ನು ತಡೆದುಕೊಂಡಿದ್ದೇನೆ. ದೇವೇಗೌಡರು ನನ್ನೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.

ನನ್ನ ನಾಯಕತ್ವಕ್ಕೆ ಯಾರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಕುಮಾರಸ್ವಾಮಿ ನಾಯಕತ್ವವನ್ನು ಪ್ರಶ್ನಿಸಿಲ್ಲ. ಯಾರಿಗೂ ಸರ್ಟಿಫಿಕೇಟ್ ಕೊಡಲು ಹೋಗಿಲ್ಲ. ಬೇರೆಯವರು ಈ ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ಈ ಹಿಂದೆ 20 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳ ಪೈಕಿ ಅರ್ಧದಷ್ಟು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಾಡಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮಿತ್ರ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದರಿಂದ ಸರ್ಕಾರ ಪತನವಾಯಿತು ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ಹೆಚ್ಚು ಮಂದಿ ಸಚಿವರಿದ್ದರು. ದೇವೇಗೌಡರು ಹೇಳಿದ್ದರೆ ಒಂದಿಬ್ಬರು ಸಚಿವ ಸ್ಥಾನ ಬಿಟ್ಟುಕೊಡುತ್ತಿದ್ದರು. ನನಗೆ ಅವಕಾಶ ಕಲ್ಪಿಸಿಕೊಡಬಹುದಿತ್ತು. ಆದರೆ, ಅದು ಆಗಲಿಲ್ಲ. ಜಾತಿಯ ಕಾರಣಕ್ಕಾಗಿ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಉತ್ತರ ಕರ್ನಾಟಕ ಭಾಗದ ಮಠಾಧೀಶರು ನನ್ನ ಬಳಿ ಹೇಳುತ್ತಿದ್ದರು ಎಂದರು.

ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ಪರಿಣಾಮಕಾರಿಯಾಗಿ ಬೆಳೆಯಬಹುದಿತ್ತು. ಆದರೆ, ಈಗಿನ ಸನ್ನಿವೇಶದಲ್ಲಿ ಅದು ಕಷ್ಟ. ದೇವೇಗೌಡರು ತುಂಬಾ ಶ್ರಮ ಹಾಕಿ ಪಕ್ಷ ಕಟ್ಟುತ್ತಿದ್ದಾರೆ. ಆದರೆ, ಅದು ಹೊಳೆಯಲ್ಲಿ ಹುಣಸೆಹಣ್ಣು ತೋಯ್ದಂತಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸಿದರೆ ಪಕ್ಷ ಸಂಘಟನೆ ಉತ್ತಮಗೊಳ್ಳಲು ಸಾಧ್ಯ ಎಂದರು.
ಜೆಡಿಎಸ್‍ನ ವಿಧಾನಪರಿಷತ್‍ನ ಬಹುತೇಕ ಸದಸ್ಯರು ಸಭೆ ನಡೆಸಿ ಚರ್ಚಿಸಿದಾಗ ಎಲ್ಲರೂ ತಮಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇನ್ನೊಮ್ಮೆ ಸಭೆ ನಡೆಸುವ ಉದ್ದೇಶ ಇತ್ತು. ನಿನ್ನೆ ನಡೆಯಬೇಕಿದ್ದ ಸಭೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಸದ್ಯಕ್ಕೆ ನಾವು ಪಕ್ಷ ಬದಲಾವಣೆ ಮಾಡುವ ನಿರ್ಧಾರ ಮಾಡಿಲ್ಲ. ಆದರೆ, ಮುಂದಿನ ಬೆಳವಣಿಗೆಗಳು ಹೇಗಿರುತ್ತವೆ ಎಂದು ಗೊತ್ತಿಲ್ಲ ಎಂದರು.

Facebook Comments