‘ನಾನು ಪಂಜರದ ಗಿಳಿಯಾಗಿದ್ದೇನೆ’ : ಪರಿಷತ್ ಸಭಾಪತಿ ಹೊರಟ್ಟಿ ಹೀಗೆ ಹೇಳಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Basavaraj-Horatti--01
ಚಿತ್ರದುರ್ಗ, ಆ.14- ನಾನು ಸಭಾಪತಿಯಾಗಿರುವುದರಿಂದ ಪಂಜರದ ಗಿಳಿಯಾಗಿದ್ದೇನೆ. ಶಿಕ್ಷಣ ಮಂತ್ರಿ ಆಗದಿರುವುದು ರಾಜ್ಯದ ಅನೇಕ ಶಿಕ್ಷಕರಿಗೆ ಬೇಸರ ತರಿಸಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಭಾಪತಿಯಾಗಿದ್ದರೂ ಕೂಡ ಶಿಕ್ಷಣ ಸಚಿವರ ಜತೆ ಚರ್ಚಿಸಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ರಾಜ್ಯದ ವಿವಿಧೆಡೆಗಳಿಂದ ಜನರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ. ನಾನು ವ್ಯಾಪ್ತಿ ಮೀರಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದರು.

ಮೇಲ್ಮನೆ ಕಲಾಪಗಳು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೇನೆ. ಸಾರ್ವಜನಿಕರು ಮಧ್ಯಾಹ್ನ 1 ಗಂಟೆ ನಂತರ, 8 ಗಂಟೆ ವರೆಗೆ ಭೇಟಿಗೆ ಅವಕಾಶ ನೀಡಿದ್ದೇನೆ. ಸಮ್ಮಿಶ್ರ ಸರ್ಕಾರವಿರುವುದರಿಂದ ಮುಖ್ಯಮಂತ್ರಿಗಳಿಗೆ ಒತ್ತಡ ಇರುವುದು ಸಹಜ. ಈ ನಡುವೆ ನನಗೆ ಕೊಟ್ಟಿರುವ ಸಭಾಪತಿ ಸ್ಥಾನವನ್ನು ಒಪ್ಪಿಕೊಂಡು ನಡೆಯುತ್ತಿದ್ದೇನೆ ಎಂದು ಹೇಳಿದರು. ವೆಂಕಯ್ಯನಾಯ್ಡು ಹಾಗೂ ನನ್ನ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ನನಗೆ ಸರ್ಕಾರಕ್ಕೆ ಪತ್ರ ಬರೆಯಲು, ಅಧಿಕಾರಿಗಳನ್ನು ಕರೆದು ಮಾತನಾಡಿಸುವ ಅಧಿಕಾರವಿದೆ ಎಂದು ಹೇಳಿದರು. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ವೇತನ ಕಡಿಮೆ ಮಾಡುವುದು, ಶಿಕ್ಷಕರ ನೇಮಕಾತಿಗೆ ಅರ್ಜಿ ಹಾಕುವುದಕ್ಕೆ ಅನುಮತಿ ನೀಡದಿರುವುದು ತಪ್ಪು ಎಂದು ಹೇಳಿದರು.

ಕೆಲವು ಕಡೆ ಶೇ.90ರಷ್ಟು ಫಲಿತಾಂಶ ಬಂದರೆ ಶಿಕ್ಷಕರ ನೇಮಕಾತಿಗೆ ಅನುಮತಿ ಸಿಗುತ್ತಿಲ್ಲ. ಶಿಕ್ಷಕರ ಕೊರತೆ ಹೆಚ್ಚಾದರೆ ಫಲಿತಾಂಶ ಕಡಿಮೆ ಬರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬಂದರೆ ಕೇವಲ ವಾರ್ನಿಂಗ್ ಕೊಟ್ಟು ಮುಂದುವರಿಸುತ್ತಾರೆ. ಇದು ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಳೆದ ಹಲವಾರು ವರ್ಷಗಳಿಂದ ಖಾಸಗಿ ಶಾಲೆಗಳಿಗೆ ಅನುದಾನ ನೀಡಿಲ್ಲ. ಹೀಗಾಗಿ ಸರ್ಕಾರ ಆದಷ್ಟು ಬೇಗ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿ ನಿರ್ಣಯ ಕೈಗೊಳ್ಳಬೇಕು. ಅಧಿಕಾರಿಗಳ ಎಡವಟ್ಟಿನಿಂದ ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ವಿಳಂಬವಾಗಿದೆ. ಸ್ನಾತಕೋತ್ತರ ಪದವಿ ಜತೆಗೆ ಬಿಎಡ್ ಮಾಡಿರುವವರನ್ನು ನೇಮಕ ಮಾಡಬೇಕಿತ್ತು.

ಆದರೆ, ಅಧಿಕಾರಿಗಳು ಸ್ನಾತಕೋತ್ತರ ಪದವಿ ಮಾಡಿರುವವರನ್ನು ನೇಮಕ ಮಾಡಿದ್ದರು. ಈಗ ಬಿಎಡ್ ಮಾಡುವಂತೆ ಸೂಚನೆ ನೀಡಿ ವೇತನ ತಡೆ ಹಿಡಿದಿದ್ದಾರೆ. ನೇಮಕಾತಿ ವೇಳೆಯೇ ಬಿಎಡ್ ಮಾಡಿದವರನ್ನು ನೇಮಕ ಮಾಡಬೇಕಿತ್ತು. ಅಧಿಕಾರಿಗಳ ತಪ್ಪಿನಿಂದ ಅರ್ಹ ಉಪನ್ಯಾಸಕರಿಗೆ ಅನ್ಯಾಯವಾಗಿದೆ. ಎರಡು ವರ್ಷ ಬಿಎಡ್ ಮಾಡುವ ಬದಲು ಒಂದು ವರ್ಷದ ಬಿಎಡ್ ಸಾಕಾಗಿತ್ತು ಎಂದು ಹೇಳಿದರು.

ಶಿಕ್ಷಕರನ್ನು ನೇಮಕಾತಿ ಮಾಡುವ ಬದಲು ಸರ್ಕಾರ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ನೀತಿಯಿಂದ 20 ಶಾಲೆಗಳು ಬಂದ್ ಆಗಿವೆ. ಆರ್‍ಟಿಇ ಅಡಿ ನೂರಾರು ಕೋಟಿ ಹಣವನ್ನು ಖಾಸಗಿ ಶಾಲೆಗಳಿಗೆ ಕೊಡಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಬಂದ್ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯಬಾರದು ಎಂದು ಹೊರಟ್ಟಿ ಹೇಳಿದರು.

Facebook Comments

Sri Raghav

Admin

Comments are closed.