ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ತಡೆಗೆ ಮುಂದಾದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.17-ಸೈಬರ್ ಅಪರಾಧ ಗಳನ್ನು ತಡೆಯಲು ಐಟಿ ಪರಿಣಿತರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿಂದು ನಡೆದ ಬೆಂಗಳೂರು ನಗರದ ಸೈಬರ್, ಆರ್ಥಿಕ ಅಪರಾಧಗಳು, ಮಾದಕ ದ್ರವ್ಯ ನಿಗ್ರಹ ಪೊಲೀಸ್ ಠಾಣೆಗಳು ಮತ್ತು ಭಯೋತ್ಪಾದನಾ ನಿಗ್ರಹದಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅವುಗಳನ್ನು ನಿಯಂತ್ರಿಸಲು ಸಾಧ್ಯ ವಾದಷ್ಟು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಆರ್ಥಿಕ ಅಪರಾಧ ತಡೆಯಲು ವಂಚಕ ಕಂಪನಿಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬೆಂಗಳೂರಿಗೆ ಎಟಿಎಸ್‍ನ್ನು ಪೂರ್ಣಪ್ರಮಾಣದಲ್ಲಿ ಒದಗಿಸಿದ್ದು, ಆಂತರಿಕ ಭಯೋತ್ಪಾದನೆ ನಿಗ್ರಹಿಸಲು ಸಹಕಾರಿಯಾಗಲಿದೆ ಎಂದರು. ಬೆಂಗಳೂರಿನಲ್ಲಿ ಸಿಇಎನ್ ಪೊಲೀಸ್ ಠಾಣೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.

ಮಟ್ಟ ಹಾಕಿ: ಮಾದಕ ವಸ್ತು ಸಾಮಾಜಿಕ ಪಿಡುಗಾಗಿದ್ದು, ಅದರ ಬಳಕೆಯನ್ನು ನಿಯಂತ್ರಿಸಲು ಮತ್ತು ಅದರ ಹಿಂದಿರುವವರನ್ನು ಮಟ್ಟ ಹಾಕಲು ಎಲ್ಲಾ ರೀತಿಯ ಕ್ರಮಕೈಗೊಳ್ಳಬೇಕು. ಮಾದಕ ವಸ್ತುವಿನ ಹಿಂದೆ ಯಾರು, ಎಷ್ಟೇ ದೊಡ್ಡವರಿದ್ದರು ಪೊಲೀಸ್ ಇಲಾಖೆ ಮಟ್ಟ ಹಾಕಬೇಕು. ಮಾದಕ ವಸ್ತುವಿನಿಂದಾಗುವ ದುಷ್ಪರಿಣಾ ಮಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು.

ಸಾರ್ವಜನಿಕರು ಕೂಡ ಮಾದಕ ವಸ್ತು ಒದಗಿಸುವವರ ಪತ್ತೆಗೆ ಸಹಕರಿಸಬೇಕು. ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು . ಇಂದು ಉದ್ಘಾಟನೆಯಾದ 88 ಹೆದ್ದಾರಿ ಗಸ್ತು ವಾಹನಗಳಿಗೆ ಆಧುನಿಕ ಉಪಕರಣ, ಕ್ಯಾಮೆರಾ, ಜಿಎಎಸ್, ವೈರ್‍ಲೆಸ್ ಸಂಪರ್ಕ ಒದಗಿಸ ಲಾಗಿದ್ದು, ಒಂದು ಹಂತದಲ್ಲಿ ಆ್ಯಂಬುಲೆನ್ಸ್ ಮಾದರಿಯಲ್ಲೂ ಕಾರ್ಯ ನಿರ್ವಹಿಸಲಿವೆ ಎಂದರು.

ಕಳೆದ 10 ವರ್ಷಗಳಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. ವಂಚಕ ಕಂಪನಿಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಪೊಲೀಸರು ಮೂಡಿಸಬೇಕು. ಇತ್ತೀಚೆಗೆ ಬಾತ್‍ರೂಂನಲ್ಲೂ ಗಾಂಜಾ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

# ಪೌರತ್ವ ಮಸೂದೆ ಕಾಯ್ದೆ ರಾಜ್ಯದಲ್ಲಿ ಶೀಘ್ರ ಅನುಷ್ಠಾನ
ಬೆಂಗಳೂರು, ಡಿ.17-ಅಕ್ರಮ ಒಳನುಸುಳುಕೋರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲೂ ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತದಿಂದ ಅಂಗೀಕರಿಸಿ ರಾಷ್ಟ್ರಪತಿಗಳಿಂದ ಅಂಗೀಕೃತವಾಗಿರುವ ಮಸೂದೆಯನ್ನು ವಿರೋಧಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ.

ರಾಜ್ಯದಲ್ಲೂ ಈ ಮಸೂದೆಯನ್ನು ಜಾರಿ ಮಾಡುವುದಾಗಿ ಪರೋಕ್ಷವಾಗಿ ಸುಳಿವು ಕೊಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದಾಗ ರಾಜ್ಯಗಳು ಜಾರಿ ಮಾಡುವುದಿಲ್ಲ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಕೇವಲ ಪ್ರತಿಭಟನೆ ನಡೆಸಬಹುದೇ ಹೊರತು ಅನುಷ್ಠಾನ ಮಾಡಲು ಬರುವುದಿಲ್ಲ ಎಂದು ಹೇಳಲು ಆಗುವುದಿಲ್ಲ.

ಕರ್ನಾಟಕದಲ್ಲೂ ಈ ಮಸೂದೆ ಯಾವಾಗ ಅನುಷ್ಠಾನ ಮಾಡಬೇಕೆಂಬುದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಈಶಾನ್ಯ ರಾಜ್ಯಗಳು ದೆಹಲಿ ಸೇರಿದಂತೆ ಮತ್ತಿತರ ಕಡೆ ಪ್ರತಿಭಟನೆ ಮಾಡುತ್ತಿರಬಹುದು. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳದೆ ಅಹಿಂಸಾತ್ಮಕ ಮಾರ್ಗದಲ್ಲಿ ಪ್ರತಿರೋಧ ವ್ಯಕ್ತಪಡಿಸಲು ಅವಕಾಶವಿದೆ. ಮಮತಾ ಬ್ಯಾನರ್ಜಿ ಇರಲಿ ಅಥವಾ ಇನ್ಯಾರೇ ಇರಲಿ ಮಸೂದೆ ಅನುಷ್ಠಾನ ಮಾಡದೆ ಬೇರೆ ದಾರಿ ಇಲ್ಲ ಎಂದರು.

ಕರ್ನಾಟಕದಲ್ಲಿ ಎಲ್ಲಿಯೂ ಕೂಡ ಮಸೂದೆ ವಿರೋಧಿಸಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಕಾನೂನು ಉಲ್ಲಂಘಿಸಿದರೆ ಪೊಲೀಸರು ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ನೀವು ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟಿದ್ದೀರ ಎಂಬ ಮಾಧ್ಯಮದವರ ಪ್ರಶ್ನೆಗೆ, ಮುಖ್ಯಮಂತ್ರಿಗಳ ಬಳಿ ಇಂತಹದ್ದೇ ಖಾತೆ ಕೊಡಿ ಎಂದು ಎಂದೂ ಕೇಳಿದವನಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನಾನು ಊಹಾಪೊಹ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

Facebook Comments