ಪೊಲೀಸ್ ಇಲಾಖೆಯಲ್ಲಿ ಬಡ್ತಿ, ವೇತನದಲ್ಲಿ ಗೊಂದಲ ಇಲ್ಲ : ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಂಬಂಧ ಪುನಃ ಎರಡು ವರ್ಷಕ್ಕೆ ನಿಗದಿಗೊಳಿಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ವರ್ಗಾವಣೆಗೊಳಿಸುವ ಸಂಬಂಧ ಪೊಲೀಸ್ ಬೋರ್ಡ್ ರಚನೆ ಮಾಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದಿನ ಸರ್ಕಾರ ಎರಡು ವರ್ಷದಿಂದ ಒಂದು ವರ್ಷಕ್ಕೆ ಅಧಿಕಾರಿಗಳ ವರ್ಗಾವಣೆ ಅವಧಿಯನ್ನು ಕಡಿತಗೊಳಿಸಿತ್ತು. ಇದರಿಂದ ಕೆಲವು ಗೊಂದಲಗಳು ಸೃಷ್ಟಿಯಾದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಹಿಂದೆ ಇದ್ದ ರೀತಿಯಲ್ಲಿ ಅಧಿಕಾರಿಗಳ ವರ್ಗಾವಣೆ ಅವಧಿಯನ್ನು ಎರಡು ವರ್ಷಕ್ಕೆ ನಿಗದಿ ಮಾಡಬೇಕೆಂಬ ಅಭಿಪ್ರಾಯ ಕೇಳಿ ಬಂದಿದೆ. ಇದನ್ನು ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಪೊಲೀಸ್ ಸಿಬ್ಬಂದಿಗಳ ವೇತನ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಬಡ್ತಿ ಅಂಚಿನಲ್ಲಿರುವವರಿಗೆ ಬಡ್ತಿಯಾದರೆ ಎಲ್ಲವೂ ಸರಿಹೋಗುತ್ತದೆ. ಅದು ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ಯುವಕರ ಭವಿಷ್ಯವನ್ನೇ ಹಾಳುಗೆಡುತ್ತಿರುವ ಆನ್‍ಲೈನ್ ಗೇಮ್‍ಗಳನ್ನು ನಿಷೇಧ ಮಾಡುವ ಸಂಬಂಧ ಇಲಾಖಾ ಮಟ್ಟದಲ್ಲಿ ಚರ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆನ್‍ಲೈನ್ ಗೇಮ್‍ಗಳನ್ನು ಯಾವ ಮಾನದಂಡದ ಮೇಲೆ ನಿಷೇಧ ಮಾಡಿದ್ದಾರೆ ಎಂಬುದರ ಕುರಿತು ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮಲ್ಲೂ ಹೊಸ ಕಾನೂನು ತರುತ್ತೇವೆ ಎಂದರು.

ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ರೀತಿಯ ಕಾನೂನುಗಳಿದ್ದು, ಇವುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂಪೂರ್ಣ ವರದಿ ಬಂದ ನಂತರ ಇದಕ್ಕಾಗಿ ಪ್ರತ್ಯೇಕವಾದ ಮಸೂದೆ ತರುವ ಚಿಂತನೆ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಇಲಾಖೆಯನ್ನು ಇನ್ನಷ್ಟು ಸುಧಾರಣೆಗೊಳಿಸುವುದು, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚು ತ್ತಿರುವ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸ್ತೃತವಾದ ಚರ್ಚೆ ನಡೆದಿದೆ. ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವುದು ಸರ್ಕಾರದ ಗುರಿ ಎಂದು ಹೇಳಿದರು.

Facebook Comments