ಹನಿಟ್ರ್ಯಾಪ್ ಪ್ರಕರಣ : ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ, ಯಾವ ಒತ್ತಡವೂ ಇಲ್ಲ : ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2-ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ. ಯಾವ ಒತ್ತಡವೂ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಡಿಲೀಟ್ ಮಾಡುವಂತೆ ಯಾರೂ ಯಾರ ಮೇಲೂ ಒತ್ತಡ ಹೇರಿಲ್ಲ. ಅಧಿಕಾರಿಗಳು ಕಾನೂನಿನ ಅನ್ವಯ ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ ತನಿಖೆ ಮಾಡುವಂತೆ ನಾನೂ ಕೂಡ ಸೂಚನೆ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಹಿರೇಕೆರೂರು, ರಾಣೆಬೆನ್ನೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರ ಹವ ಕೂಡ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಡಿ.9ರಂದು ಜನರ ತೀರ್ಮಾನ ಹೊರ ಬೀಳಲಿದೆ ಎಂದರು.

ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್-ಜೆಡಿಎಸ್ ಹತಾಶ ಮನೋಭಾವನೆಯಿಂದ ಮೈತ್ರಿ ಸರ್ಕಾರ ರಚನೆ ಮಾಡುವುದಾಗಿ ಹೇಳುತ್ತಿದೆ. ಅದು ಅಸಾಧ್ಯ ಎಂದು ಬೊಮ್ಮಾಯಿ ಹೇಳಿದರು. ಕಳೆದ ಒಂದು ವಾರದ ಹಿಂದೆ ಮೈತ್ರಿ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಮತ್ತೆ ಹೊಸ ರಾಗ ಎಳೆಯುತ್ತಿದ್ದಾರೆ. ಕನಸಿನಲ್ಲಿಯೂ ವಿಪಕ್ಷವರಿಗೆ ಯಡಿಯೂರಪ್ಪ ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಈ ರೀತಿ ಮಾಡುವಂತಹ ಸಾಧ್ಯತೆ ಇರಬಹುದು ಎಂಬುದು ನನ್ನ ಅನಿಸಿಕೆ. ಕಾನೂನಿನ ಪ್ರಕಾರ ಚುನಾವಣೆ ನಡೆಯಬೇಕು. ಇದಕ್ಕೆ ಸಬಂಧಿಸಿದಂತೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಲ್ಲಿ ಆಂತರಿಕ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಒಬ್ಬರೇ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಉಳಿದವರು ಪತ್ರಿಕಾಗೋಷ್ಠಿಗಷ್ಟೇ ಸೀಮಿತವಾಗಿದ್ದಾರೆ. ಸರ್ಕಾರ ರಚಿಸುತ್ತೇವೆ ಎನ್ನುವ ಮೂಲಕ ತಮ್ಮ ಶಾಸಕರ ಅಸಮಾಧಾನ ನೀಗಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

Facebook Comments