ಮೇಲ್ಮನೆಯಲ್ಲಿ ಹೊರಟ್ಟಿ ಗುಣಗಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.9-ವಿಧಾನಪರಿಷತ್‍ನ ನೂತನ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರನ್ನು ಮುಕ್ತಕಂಠದಿಂದ ವಿಧಾನಪರಿಷತ್‍ನಲ್ಲಿ ಅಭಿನಂದಿಸಲಾಯಿತು. ನೂತನ ಸಭಾಪತಿಯಾಗಿ ಆಯ್ಕೆಯಾದ ನಂತರ ಸಭಾನಾಯಕರಾದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಶತಮಾನದ ಇತಿಹಾಸವಿರುವ ಮೇಲ್ಮನೆ ಸಭಾಪತಿಯಾಗಿ ಹೊರಟ್ಟಿ ಅವರು ಆಯ್ಕೆಯಾಗಿರುವುದು ಹಿರಿಯರಿಗೆ ಸಂದ ಗೌರವ. ಸಭಾಪತಿ ಸ್ಥಾನಕ್ಕೆ ಅತಿ ಸೂಕ್ತವಾದ ವ್ಯಕ್ತಿ ಎಂದು ಶ್ಲಾಘಿಸಿದರು.

ಚಿಂತಕರ ಛಾವಡಿ, ಬುದ್ದಿವಂತರ ಸದನ ಎಂದು ಕರೆಯುವ ಈ ಮೇಲ್ಮನೆ ಸದಸ್ಯರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಸದನದ ಘನತೆಯನ್ನು ಎತ್ತಿ ಹಿಡಿಯುವಂತ ಕೆಲಸ ಮಾಡುತ್ತಾರೆ ಎಂದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಅತ್ಯಂತ ಹಿರಿಯ ಸದಸ್ಯರನ್ನು ಸಭಾಪತಿಯಾಗಿ ಆಯ್ಕೆ ಮಾಡುವ ಮೂಲಕ ವಿಶ್ವಾಸವನ್ನು ಹೆಚ್ಚಿಸಲಾಗಿದೆ. ಒಳ್ಳೆಯ ಪರಂಪರೆ ಉಳಿಸುವುದರ ಜೊತೆಗೆ ಹೊಸ ದಿಕ್ಸೂಚಿ ಕೊಡುವ ಕೆಲಸವನ್ನು ತಮ್ಮ ಅನುಭವದಿಂದ ಸಭಾಪತಿಯಾಗಿ ಮಾಡುತ್ತಿರಿ ಎಂದು ಹೊರಟ್ಟಿ ಅವರನ್ನು ಅಭಿನಂದಿಸಿದರು.

ಸದನದ ಹಿರಿಮೆ, ಗರಿಮೆ ಪುನರ್ ಸ್ಥಾಪನೆಗೆ ಬೇಕಾದ ಹಲವು ಮನಸ್ಸುಗಳನ್ನು ಗೆಲ್ಲುವಂತಹ ಕೆಲಸ ಮಾಡುತ್ತೀರಿ. ಆಡಳಿತ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೀರಿ. ಜನ ಹಿತಕ್ಕಾಗಿ ಸುಧಾರಣೆ ತರಲು ಸರ್ಕಾರದ ಕೆಲಸ ಹಾಗೂ ಜನಪರ ಕೆಲಸಗಳಿಗೂ ಒತ್ತು ಕೊಡುತ್ತೀರಿ ಎಂಬ ನಂಬಿಕೆಯಿದೆ. ಆಡಳಿತ ಪಕ್ಷ ನಿಮಗೆ ಸಂಪೂರ್ಣ ಸಹಕಾರವನ್ನು ನೀಡಲಿದೆ. ಸಭಾಪತಿ ಸ್ಥಾನ ಸಭೆ ನಡೆಸುವುದರ ಹೊರತಾಗಿಯೂ ಹಲವಾರು ವಿಚಾರಗಳಿಗೆ ಕೊಂಡಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆ ಕೆಲಸ ಮಾಡುತ್ತೀರಿ ಎಂಬ ವಿಶ್ವಾಸವಿದೆ ಎಂದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಭಾಪತಿ ಸ್ಥಾನದ ಆಯ್ಕೆ ಈ ರೀತಿ ಆಯಿತಲ್ಲ ಎಂದು ಬಹಳ ನೋವುಂಟು ಮಾಡಿದೆ. ದೇಶದ ವಿಧಾನಪರಿಷತ್‍ನ ಇತಿಹಾಸದಲ್ಲೇ ಮೊದಲ ಸ್ಥಾನ ಗಳಿಸಿರುವ ಹೊರಟ್ಟಿ ಅವರು ಸಭಾಪತಿಯಾಗಿ ಈ ರೀತಿ ಆಯ್ಕೆಯಾಗಬೇಕಾದದ್ದು ನೋವು ತಂದಿದೆ. ಸತತ ಏಳು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಬಂದರೂ ವಿಧಾನಸಭೆಗೆ ಹೋಗುವ ಪ್ರಯತ್ನ ಮಾಡದ ವಿಶಿಷ್ಟ ವ್ಯಕ್ತಿತ್ವ ನಿಮ್ಮದು. ಸಚಿವರಾಗಿ, ಶಿಕ್ಷಕರ, ಶಿಕ್ಷಣದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಿದ್ದೀರಿ.

ಶಿಕ್ಷಕರಿಗೆ ಎಕ್ಸ್ ಗ್ರೇಷಿಯಾ ಕೊಡಿಸಿದ್ದು, 8ನೇ ತರಗತಿ ಮಕ್ಕಳಿಗೆ ಸೈಕಲ್ ನೀಡುವುದು ಪ್ರಾರಂಭಿಸಿದ್ದು, ನಿಮ್ಮ ಅವಧಿಯಲ್ಲೇ . ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿಮ್ಮನ್ನು ಮಂತ್ರಿ ಮಾಡಬೇಕಾಗಿತ್ತು. ಆದರೆ ಆಗಲಿಲ್ಲ. ಸಭಾಪತಿ ಆಯ್ಕೆಗೆ ಬಿಜೆಪಿಯವರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರು ಪರಿ ಪರಿಯಾಗಿ ಕೇಳಿಕೊಂಡಾಗ, 10 ನಿಮಿಷ ಮುಂದೂಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭಾಪತಿ ಚುನಾವಣೆ ಕಲಾಪವನ್ನು ಪೀಠ ಕೈಗೊಳ್ಳಬಹುದಿತ್ತು.

ಚುನಾವಣೆ ನಂತರ ನಿಮ್ಮ ನೋವನ್ನು ಆಲಿಸುತ್ತೇವೆ ಎಂದು ಹೇಳಿದ್ದರೆ ಅವರು ಕೂಡ ಚುನಾವಣೆಗೆ ಸಹಕಾರ ಕೊಡುತ್ತಿದ್ದರು. ನಿನ್ನೆ ವಿಧೇಯಕಕ್ಕೆ ಅನುಮೋದನೆ ದೊರೆಯುವ ಸಂದರ್ಭದಲ್ಲಿ ನಾವು ಕೂಡ ವಿರೋಧ ವ್ಯಕ್ತಪಡಿಸಿದ್ದೆವು ಆ ಸಂದರ್ಭದಲ್ಲಿ ಮತ ವಿಭಜನೆಗೆ ಅವಕಾಶ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ಸದನದಲ್ಲಿ ಬಹಳ ನೋವುಂಟು ಮಾಡುವ ಘಟನೆಗಳು ನಡೆಯುತ್ತಿವೆ. ಇದು ಪೀಠದಿಂದ ಆಗಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಿಂದ ಆಗಿರುವ ಲೋಪ. ಆಡಳಿತ, ಪ್ರತಿಪಕ್ಷಗಳ ಸದಸ್ಯರನ್ನು ಒಟ್ಟಿಗೆ ಕರೆದೊಯ್ದು ಅಭಿವೃದ್ಧಿಗೆ ಹೊಸ ರೂಪಕೊಡುತ್ತೀರಿ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಮಾತನಾಡಿ, ದೇಶದ ಇತಿಹಾಸದಲ್ಲಿ ಶಿಕ್ಷಕರಾದವರು ರಾಷ್ಟ್ರಪತಿಯಾಗಿದ್ದರು. ಈಗ ಶಿಕ್ಷಕರಾಗಿದ್ದವರು ಸಭಾಪತಿಯಾಗಿದ್ದಾರೆ. ಮುಧೋಳದ ಯಡಹಳ್ಳಿ ಗ್ರಾಮದಲ್ಲಿ ಜನಿಸಿದ ಹೊರಟ್ಟಿ ಅವರು 7 ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಮ್ಮ ಬಳಿ ಬಂದವರಿಗೆ ನಿರಾಸೆ ಮಾಡಿಲ್ಲ.ಕಾವೇರಿಯಿಂದ ಭೀಮಾನದಿವರೆಗೂ ಶಿಕ್ಷಕರಿಗಾಗಿ ಮಾಡಿದ ಹೋರಾಟ ಇತಿಹಾಸದ ಪುಟಗಳಲ್ಲಿ ಉಳಿಯುತ್ತದೆ. ಎಲ್ಲ ವರ್ಗದ ಜನರ ಬಗ್ಗೆ ಚಿಂತಿಸುವ ಚಿಂತಕರ ಛಾವಡಿ ಇದು. ಸಭಾಪತಿ ಪೀಠಕ್ಕೆ ನ್ಯಾಯವನ್ನು ಕೊಡುತ್ತೀರಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸ್ವಂತ ಊರು ಯಡಹಳ್ಳಿಯನ್ನು ಅಭಿವೃದ್ಧಿಪಡಿಸಿರುವುದು ಅವರಿಗೆ ಹುಟ್ಟೂರಿನ ಬಗ್ಗೆ ಇರುವ ಪ್ರೀತಿ ನಿದರ್ಶನವಾಗಿದೆ ಎಂದರು.

ಸಾಮಾಜಿಕ ಕಳಕಳಿ ಹೊಂದಿರುವ ನೀವು ಸದನದಲ್ಲಿ ಅನುಭವ ಮಂಟಪದ ರೀತಿಯಲ್ಲಿ ನಡೆಸುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್‍ನ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಳ್ಳೆಯ ತೀರ್ಮಾನ ಮಾಡಿ ಬಸವರಾಜ್ ಹೊರಟ್ಟಿ ಅವರನ್ನು ಸಭಾಪತಿಯಾಗುವಂತೆ ಮಾಡಿದ್ದಾರೆ. ನನ್ನ ಹೃದಯ ತುಂಬಿಬಂದಿದೆ. ಅವರು ಪ್ರಾದೇಶಿಕತೆ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿದವರಲ್ಲ. ಸಭಾಪತಿಯಾಗಲಿಲ್ಲ ಎಂಬ ನೋವು ಈಗ ನಿವಾರಣೆಯಾಗಿದೆ ಎಂದರು.

Facebook Comments