ಜಿಲ್ಲೆಯ ಸಮಗ್ರ ಅಭಿವೃದ್ಧಿಯೊಂದಿಗೆ ಶಾಶ್ವತ ನೀರಾವರಿಗೆ ಒತ್ತು : ಬಸವರಾಜು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 24-ಕೇಂದ್ರ ಸರ್ಕಾರದ ನೆರವಿನೊಂದಿಗೆ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಿ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಸಂಸದ ಜಿ.ಎಸ್.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಲೆಯಲ್ಲಿ ಹಾಗೂ ನಾನು ನಿರಂತರವಾಗಿ ನೀರಾವರಿ ಹೋರಾಟಗಳನ್ನು ನಡೆಸಿಕೊಂಡು ಬಂದ ಪರಿಣಾಮ ಜನರು ನನ್ನನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ನಾನು ಅವರಿಗೆ ಹೃದಯಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಈಗ 5ನೇ ಬಾರಿಗೆ ನಾನು ಸಂಸದನಾಗಿ ಆಯ್ಕೆಯಾಗಿದ್ದೇನೆ. ನಿರಂತರವಾಗಿ ಸುಮಾರು 50 ವರ್ಷಗಳಿಂದ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಎಲ್ಲಾ ಹೋರಾಟಗಳ ಪರಿಣಾಮ ಇಂದು ನನ್ನ ಗೆಲುವು. ಅದಕ್ಕೆ ಸೂಕ್ತ ರೀತಿಯಲ್ಲೇ ಜನರ ನೆರವಿಗೆ ಧಾವಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಎತ್ತಿನಹೊಳೆ ಹಾಗೂ ಹೇಮಾವತಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಭೀಕರ ಬರಗಾಲಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತೇನೆ.

ಜೊತೆಗೆ ಹೆಚ್ಚಿನ ಅನುದಾನ ತಂದು ಜಿಲ್ಲೆಯಲ್ಲಿ ಫುಡ್ ಪಾರ್ಕ್ ಯೋಜನೆ, ಕಾರಿಡಾರ್ ರಸ್ತೆ, ಇಸ್ರೋ ಘಟಕ ಸ್ಥಾಪನೆ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳ ಮಂಜೂರಾತಿಗಾಗಿ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ನನ್ನ ಈ ಗೆಲುವು ಜಿಲ್ಲೆಯ ಜನರ ಗೆಲುವಾಗಿದೆ ಇದರ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವೇ ಮೆಚ್ಚುವಂತಹ ಕೆಲಸಗಳನ್ನು ಮಾಡಿದ್ದಾರೆ. ದೇಶದ ಭದ್ರತೆ ಕಡು ಬಡವರ ಬಗ್ಗೆ ಅವರಿಗಿರುವ ಕಾಳಜಿ ಎಲ್ಲವೂ ನನಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ನಾನು ಸೋಲಿಸಿದ್ದೇನೆ ಎಂಬ ಗರ್ವ ನನಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸೋತಿದ್ದರೂ ಪರವಾಗಿಲ್ಲ, ದೇವೇಗೌಡರು ಗೆಲ್ಲಬೇಕಿತ್ತು. ನಮಗೆ ಎಲ್ಲರೂ ಹಿರಿಯರು ಮಾರ್ಗದರ್ಶಕರು ಆದರೆ ಅವರು ಹಾಸನವನ್ನು ಬಿಟ್ಟು ತುಮಕೂರಿಗೆ ಬರಬಾರದಿತ್ತು ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ