ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ನವೀಕೃತಗೊಂಡ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.26- ನಗರದ ಚಾಲುಕ್ಯ ವೃತ್ತದ ಬಳಿ ನವೀಕೃತಗೊಂಡ ಜಗಜ್ಯೋತಿ ಬಸವೇಶ್ವರರ ಅಶ್ವರೂಢ ಪ್ರತಿಮೆ ಉದ್ಘಾಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನೆರವೇರಿಸಿದರು.

ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಬಸವೇಶ್ವರರ ಅಶ್ವರೂಢ ಪ್ರತಿಮೆಯನ್ನು ನವೀಕರಣಗೊಳಿಸಲಾಗಿದ್ದು, ಇನ್ನು ಮುಂದೆ ಬಸವ ಸಮಿತಿಯೇ ಇದರ ನಿರ್ವಹಣೆ ಮಾಡಲಿದೆ.

ಹಲವು ದಿನಗಳಿಂದ ಮುಂದೂಡಿಕೆಯಾಗಿದ್ದ ಉದ್ಘಾಟನಾ ಸಮಾರಂಭವನ್ನು ಇಂದು ಸಿಎಂ ಅವರ ಜೊತೆಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಸಚಿವ ವಿ.ಸೋಮಣ್ಣ, ಮೇಯರ್ ಗೌತಮ್ ಕುಮಾರ್, ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್, ಸಚಿವ ಸಿ.ಟಿ ರವಿ, ಸಿಎಂ ರಾಜಕೀಯ ಕಾರ್ಯದರ್ಶಿ ಗಳಾದ ಎಸ್ ಆರ್ ವಿಶ್ವನಾಥ್ ಹಾಗೂ ಶಂಕರಗೌಡ ಬಿ.ಪಾಟೀಲ್ ಪಾಲ್ಗೊಂಡಿದ್ದರು.

ಪ್ರತಿಮೆ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಇಂದು ಎಲ್ಲರೂ ಭಕ್ತಿಭಾವದಿಂದ ಒಟ್ಟಿಗೆ ಸೇರಿ ಅಶ್ವರೂಢ ಬಸವೇಶ್ವರ ಪ್ರತಿಮೆ ಉದ್ಘಾಟನೆ ಮಾಡಿದ್ದೇವೆ ಎಂದರು.

ಮೌಢ್ಯದಲ್ಲಿದ್ದ ಜನರಿಗೆ ಅತ್ಯುತ್ತಮ ಜೀವನ ಕಲ್ಪಿಸಿಕೊಟ್ಟ ಬಸವಣ್ಣನವರು, ಆದರ್ಶ ವ್ಯಕ್ತಿಯಾಗಿ ಎಲ್ಲರ ಮನಸ್ಸಲ್ಲೂ ಸದಾಕಾಲ ನೆಲೆಸಿರುತ್ತಾರೆ. ಕನ್ನಡ ಸಾಹಿತ್ಯ ಮತ್ತು ವಚನ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಬಸವಣ್ಣನವರ ಸಮಾಸಮಾಜ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಸಮಸಮಾಜ ನಿರ್ಮಿಸುವಲ್ಲಿ ಮುಂದಾಗೋಣ ಎಂದು ಕರೆ ನೀಡಿದರು.

ಬಸವಣ್ಣವರ ತತ್ವಗಳು ಎಲ್ಲರಿಗೂ ಆದರ್ಶವಾಗಿರಲಿ. ಮುಂದಿನ ಪೀಳಿಗೆಗೂ ಅವರ ತತ್ವಾದರ್ಶಗಳು ಮಾರ್ಗದರ್ಶಕವಾಗಿರಲೆಂದು 1.5 ಕೋಟಿ ವೆಚ್ಚದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

Facebook Comments

Sri Raghav

Admin