ಬಾಲಿವುಡ್‍ನ ಹಿರಿಯ ನಿರ್ದೇಶಕ ಬಸು ಚಟರ್ಜಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.4- ಬಾಲಿವುಡ್‍ನ ಹಿರಿಯ ನಿರ್ದೇಶಕ ಬಸು ಚಟರ್ಜಿ (93) ಅವರು ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಬಾಲಿವುಡ್‍ನ ಶೋಮ್ಯಾನ್ ರಾಜ್‍ಕಪೂರ್ ಅಭಿನಯದ ತಿಸ್ರೀ ಕಸಮ್ ಚಿತ್ರದ ಸಹ ನಿರ್ದೇಶಕನಾಗಿ ವೃತ್ತಿ ಆರಂಭಿಸಿದ ಚಟರ್ಜಿ ನಂತರ ನಿರ್ದೇಶಕ, ನಿರ್ಮಾಪಕ, ಸಾಹಿತ್ಯ ರಚನೆಕಾರರಾಗಿ ಗಮನ ಸೆಳೆದಿದ್ದರು.

ಸಾರಾ ಆಕಾಶ್ ಮೂಲಕ ಸ್ವಾತಂತ್ರ್ಯ ನಿರ್ದೇಶಕರಾದ ಬಸು ಚಟರ್ಜಿ ಬಾಲಿವುಡ್‍ನಲ್ಲಿ ಚೋಟಿ ಸಿ ಬಾತ್, ಪ್ರೇಮ್ ವಿವಾಹ್, ಮಂಜಿಲ್, ರತ್ನದೀಪ್, ತ್ರಿಶಂಕು ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಲ್ಲರದೆ, ರಜನಿಗಂದ್, ದಿಲ್ಲಾಗಿ, ಹಮಾರಿ ಬಹು ಅಲ್ಕಾ ಚಿತ್ರಗಳಿಗೆ ಸಂಭಾಷಣೆ, ಲಾಂಕೋ ಕಿ ಬಾತ್, ಉಸ್ ಪಾರ್ ಸೇರಿದಂತೆ ಮುಂತಾದ ಚಿತ್ರಗಳಿಗೆ ಚಿತ್ರಕಥೆ ಒದಗಿಸಿದ್ದರು.

ಚಿತ್ರರಂಗದಲ್ಲಿ ನಿರ್ದೇಶನ, ಚಿತ್ರಕಥೆ, ಸಂಭಾಷಣೆ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದ ಬಸು ಚಟರ್ಜಿ ಬಾತೋನ್ ಬಾತೋನ್ ಮೈನ್, ಪಸಂದ್ ಆಪ್ನಾ, ಆಪ್ನಾ, ಲಖೋಂಕಿ ಬಾತ್, ಏಕ್ ರುಕಾ ಹೂವಾ ಫೈಸ್ಲಾ ಚಿತ್ರಗಳನ್ನು ನಿರ್ಮಿಸಿರುವುದರ ಜೊತೆಗೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಜಾನಿ, ದರ್ಪಣ್, ಏಕ್ ಪ್ರೇಮ್ ಕಥಾ ಸೇರಿದಂತೆ ಹಲವು ಧಾರಾವಾಹಿಗಳನ್ನು ಬಸು ನಿರ್ದೇಶಿಸಿದ್ದರು.

ಸಾರಾ ಆಕಾಶ್ ಚಿತ್ರಕ್ಕೆ ಉತ್ತಮ ಚಿತ್ರಕಥೆಗಾರನಾಗಿ ಫಿಲಂಫೇರ್ ಪ್ರಶಸ್ತಿ, ದುರ್ಗಾ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ, ಚಿತ್ರರಂಗದ ಸೇವೆಯನ್ನು ಗುರುತಿಸಿ ಐಫಾ ಪ್ರಶಸ್ತಿಗಳನ್ನು ನೀಡಲಾಗಿದೆ.ಬಸು ಅವರು ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

ಬಸು ಚಟರ್ಜಿಯ ಅವರ ನಿಧನದಿಂದ ಚಿತ್ರರಂಗವು ಒಬ್ಬ ಶ್ರೇಷ್ಠ ನಿರ್ದೇಶಕರನ್ನು ಕಳೆದುಕೊಂಡಿದೆ ಎಂದು ಚಿತ್ರ ನಿರ್ದೇಶಕ ಹಾಗೂ ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘದ ಅಧ್ಯಕ್ಷ ಅಶೋಕ್ ಪಂಡಿತ್ ಹೇಳಿದ್ದಾರೆ.

Facebook Comments