ಬಂಗಾಳದಲ್ಲಿ ಜೋರಾಗಿದೆ ಮೋದಿ ಹವಾ, ದೀದಿಗೆ ಕಾದಿದೆ ಶಾಕ್..!?

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತ್ತಾ, ಮಾ.21- ಆಡಳಿತ ವಿರೋಧಿ ಅಲೆಯಿಂದಾಗಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ಜನಸಂಘ ಸ್ಥಾಪಕರ ನಾಡಿನಲ್ಲಿ ಕೆಸರಿ ಬಾವುಟ ಹಾರಿಸಬೇಕು ಎಂಬ ಬಿಜೆಪಿಗರ ಕನಸು ನನಸಾಗುವ ಸಾಧ್ಯತೆಗಳು ದಟ್ಟವಾಗಿವೆ.

ಪಂಚರಾಜ್ಯಗಳಿಗೆ ನಡೆಯುತ್ತಿರುವ ವಿಧಾನಸಭೆ ಚುನಾವನೆ ಪೈಕಿ ಪಶ್ಚಿಮ ಬಂಗಾಳ ಅತ್ಯಂತ ಪ್ರತಿಷ್ಠಿತ ಕಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಪಶ್ಚಿಮ ಬಂಗಾಳವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ತೇಜೇಸ್ವಿ ಸೂರ್ಯ ಸೇರಿದಂತೆ ಅನೇಕ ನಾಯಕರು ಪಶ್ಚಿಮ ಬಂಗಾಳದಲ್ಲಿ ಠಿಕಾಣಿ ಹೂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಬೆಳೆಯುತ್ತಿರುವ ವೇಗ ನೋಡಿದರೆ ಈ ಬಾರಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವುದು ನಿಶ್ಚಿತವಾಗಿದೆ ಎಂದು ವರದಿಗಳು ಹೇಳುತ್ತಿವೆ.

ಮಮತಾ ಬ್ಯಾನರ್ಜಿ ಅವರ 10 ವರ್ಷಗಳ ಆಡಳಿತದಿಂದ ಸಹಜವಾಗಿ ಆಡಳಿತ ವಿರೋಧಿ ಅಲೆ ತಲೆ ಎತ್ತಿದೆ. ಅದಕ್ಕೆ ತಕ್ಕಂತೆ ಕೇಸರಿ ಪಡೆ ಬೇರೆಲ್ಲಾ ಮಾಡಿದಂತೆ ಇಲ್ಲಿಯೂ ಭಾವನಾತ್ಮಕ ವಿಷಯಗಳನ್ನು ಕೆಣಕಿದೆ. ಹಲವಾರು ಗಲಭೆಗಳಾಗಿವೆ. ಟಿಎಂಸಿಯನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆದಿದೆ. ಬಿಜೆಪಿ ತನ್ನ ಸೈದ್ಧಾಂತಿಕ ಹೋರಾಟಗಳಿಂದ ಮತಳ ಕ್ರೂಢಿಕರಣ ಮಾಡಿದೆ. ಮಾರ್ಚ್ 27ರಿಂದ ವಿಧಾನಸಭೆ ಚುನಾವಣೆಗಳು ನಡೆಯುತ್ತಿದ್ದು, ಎಂಟು ಹಂತಗಳಲ್ಲಿ ಮತದಾನವಾಗಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಮಗ್ಗಲು ಬದಲಿಸಿದೆ. ದುರ್ಬಲ ಸಂಘಟನೆಗೆ ಹೊಸ ಶಕ್ತಿ ತುಂಬಲಾಗಿದೆ.2011ರಲ್ಲಿ ಶೇ.4ರಷ್ಟಿದ್ದ ಮತಗಳ ಹಂಚಿಕೆಯನ್ನು 2019ಕ್ಕೆ ಶೇ.40ಕ್ಕೆ ಹೆಚ್ಚಿಸಿಕೊಂಡಿದೆ.

ಈ ಬಾರಿ ಒಟ್ಟು 294 ಕ್ಷೇತ್ರಗಳ ಪೈಕಿ ಬಿಜೆಪಿ 200 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಅಕಾಡಕ್ಕೆ ಇಳಿದಿದೆ. ಮಮತಾ ಬ್ಯಾನರ್ಜಿ ಅವರನ್ನು ಹೊರಗಿನವರು ಎಂದು ಪ್ರಚಾರ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ದಿದಿ ವಿರುದ್ಧ ಕಟು ಶಬ್ಧಗಳಲ್ಲಿ ಟೀಕೆ ಮಾಡುತ್ತಿದ್ದಾರೆ.

ಜನಸಂಘ ಸ್ಥಾಪಕರಲ್ಲಿ ಒಬ್ಬರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟೂರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ಮೋದಿ ಅವರ ಕನಸಾಗಿದೆ. ಅದಕ್ಕಾಗಿ ಅತ್ಯುಗ್ರ ಪ್ರಚಾರ ನಡೆಸುತ್ತಿದ್ದಾರೆ. ದಿನೇ ದಿನೇ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಪಡೆಯುತ್ತಿದೆ.

ಶೇ.30ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದರೆ ಅದು ಬಿಜೆಪಿಗೆ ಭಾರೀ ದಿಗ್ವಿಜಯ ಎಂದೇ ಹೇಳಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಬಡಪಟ್ಟಿಗೆ ಹೆದರುತ್ತಿಲ್ಲ.ಪ್ರಧಾನಿ ಸೇರಿದಂತೆ ಬಿಜೆಪಿ ಗುಂಪಿಗೆ ಏಕಾಂಗಿಯಾಗಿಯೇ ತಿರುಗೇಟು ನೀಡುತ್ತಿದ್ದಾರೆ. ತಮ್ಮದೇ ಗರಡಿಯಲ್ಲಿ ಬೆಳೆದು ಈಗ ಬಿಜೆಪಿ ಸೇರಿರುವ ಆಪ್ತರ ವಿರುದ್ಧವೇ ಹೋರಾಟ ನಡೆಸಬೇಕಾದ ಸ್ಥಿತಿ ದಿದಿಯದು. ಆದರೂ ಅವರು ಎದೆಗುಂದಿಲ್ಲ.

ಪಶ್ಚಿಮ ಬಂಗಾಳದ 1952ರ ವಿಧಾನಸಭೆ ಚುನಾವಣೆಯಲ್ಲಿ ಹಿಂದು ಮಹಾಸಭಾ ಭಾರತೀಯ ಜನಸಂಘದ ಜೊತೆಯಾಗಿ ಸ್ಪರ್ಧೆ ಮಾಡಿ 13 ಸ್ಥಾನಗಳನ್ನು ಗೆದ್ದು, ಶೇ.8ರಷ್ಟು ಮತಗಳನ್ನು ಪಡೆದಿತ್ತು.1953ರಲ್ಲಿ ಮುಖರ್ಜಿ ಅವರ ಸಾವಿನ ಬಳಿಕ ಎಡ ಪಕ್ಷಗಳು ಬಲಗೊಳ್ಳಲಾರಂಭಿಸಿದವು. 1967 ಮತ್ತು 1971ರ ಚುನಾವಣೆಗಳಲ್ಲಿ ಬಲಪಂಥೀಯ ಪಕ್ಷಗಳು ಒಂದು ಸ್ಥಾನ ಮಾತ್ರ ಗೆಲ್ಲಲು ಶಕ್ತವಾಗಿದ್ದವು.

ಪಶ್ಚಿಮ ಬಂಗಾಳದಲ್ಲಿ ಕೆಸರಿ ಪಡೆಯ ಹೋರಾಟಕ್ಕೆ ಸುದೀರ್ಘ ಇತಿಹಾಸ ಇದೆ. ಆದರೆ ಚುನಾವಣೆ ರಾಜಕೀಯದಲ್ಲಿ ಯಶಸ್ಸು ಸಾಧಿಸಿಲ್ಲ. ಈ ಬಾರಿ ಕೆಸರಿ ಪಡೆಯ ಕನಸು ನನಸಾಗಲಿಯೇ ಎಂಬ ಕುತೂಹಲಕ್ಕೆ ಮೇ 2ರಂದು ಫಲಿತಾಂಶ ಉತ್ತರ ನೀಡಲಿದೆ.

Facebook Comments

Sri Raghav

Admin