ಬಿಬಿಎಂಪಿ ನಗರ ಯೋಜನೆ ಪುನಾರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಮಾಡದಿದ್ದರೇನಂತೆ. ಹೊಸ ಯೋಜನೆಗಳನ್ನು ರೂಪಿಸುವುದರಲ್ಲಿ ಕೊರತೆಯಿಲ್ಲ. ಅಷ್ಟೇ ಅಲ್ಲ, ಇರುವ ಯೋಜನೆಗಳನ್ನೂ ಪುನರ್ ರಚಿಸುವುದೂ ತಪ್ಪಿಲ್ಲ.  ವಿಷನ್ ಬೆಂಗಳೂರು-2050 ಹಲವು ಯೋಜನೆಗಳನ್ನು ರಚಿಸಲಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಂಪನ್ಮೂಲ ಕ್ರೋಢೀಕರಣ, ಮಹಾನಗರದ ಅಭಿವೃದ್ಧಿಗೆ ಹತ್ತು-ಹಲವು ಯೋಜನೆಗಳನ್ನು ರೂಪಿಸಲಾಗಿದೆ.

ಅದೇ ರೀತಿ ಸಂಪನ್ಮೂಲ ವಿಕೇಂದ್ರೀಕರಣಕ್ಕೆ ಅಧಿಕಾರಿಗಳು ಹಲವು ಯೋಜನೆಗಳನ್ನು ಪುನರ್ ರಚಿಸುವ ಖತರ್ನಾಕ್ ಐಡಿಯಾಗಳನ್ನೂ ಮಾಡುತ್ತಿದ್ದಾರೆ. ಅದರ ಅಂಗವಾಗಿಯೇ ಬಿಬಿಎಂಪಿಯಲ್ಲಿದ್ದ ನಗರ ಯೋಜನೆ ವಿಭಾಗವನ್ನು ಪುನರ್ ರಚಿಸಿ ಹೊಸದಾಗಿ ಕಟ್ಟಡ ಪರವಾನಗಿ ಕೋಶ ಮತ್ತು ನಗರ ಯೋಜನೆ ಕೋಶಕ್ಕೆ ಅಧಿಕಾರಿ ಅಭಿಯಂತರರನ್ನು ನಿಯೋಜಿಸಲಾಗಿದೆ.

ಬಿಬಿಎಂಪಿ ಕೆಲಸ-ಕಾರ್ಯಗಳ ಹಿತದೃಷ್ಟಿ ಯಿಂದ ನಗರ ಯೋಜನೆ ವಿಭಾಗವನ್ನು ರದ್ದುಗೊಳಿಸಿ ಕೇಂದ್ರ ಕಚೇರಿ ವ್ಯಾಪ್ತಿಗೆ ಬರುವ ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನಾನುಭಾವ ಪ್ರಮಾಣ ಪತ್ರ ಮಂಜೂರಾತಿ ನೀಡಲು ಪ್ರತ್ಯೇಕ ಕೋಶ ಮತ್ತು ಬೆಂಗಳೂರು ನಗರ ಯೋಜನೆ ನೀಲನಕ್ಷೆ ಮತ್ತು ಉಪವಿಧಿಗಳನ್ನು ತಯಾರಿಸಲು ನಗರ ಯೋಜನೆಗೆ ಸಂಬಂಧಿಸಿದಂತೆ ರಸ್ತೆ ಜಾಲ, ಜಂಕ್ಷನ್ ಸೇರಿದಂತೆ ನಗರದ ಯೋಜನೆಗಳನ್ನು ರೂಪಿಸಲು ಮತ್ತು ಸಲಹೆ ನೀಡಲು ಕಟ್ಟಡ ಪರವಾನಗಿ ಕೋಶ ಮತ್ತು ನಗರ ಕೋಶ ಎಂಬ ಎರಡು ಪ್ರತ್ಯೇಕ ವಿಭಾಗಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ.

ಕಟ್ಟಡ ಪರವಾನಗಿ ಕೋಶ ಉತ್ತರ-ದಕ್ಷಿಣ ವಿಭಾಗಗಳನ್ನಾಗಿ ಮಾಡಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ನಗರ ಯೋಜನೆ ಕೋಶ ಸೃಷ್ಟಿಸಿ ಅಪರ ನಿರ್ದೇಶಕರು, ಜಂಟಿ ನಿರ್ದೇಶಕರು, ಉಪನಿರ್ದೇಶಕರು, ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶವನ್ನು ಬಿಬಿಎಂಪಿ ಆಯುಕ್ತರು ಹೊರಡಿಸಿದ್ದು, ಕಟ್ಟಡ ಪರವಾನಗಿ ಕೋಶ ಉತ್ತರ ವಿಭಾಗದ ಜಂಟಿ ನಿರ್ದೇಶಕರಾಗಿ ಆರ್.ಪ್ರಸಾದ್, ಎಸ್.ವಿ.ರಾಜೇಶ್, ಸಿ.ಎನ್.ಶಿವಕುಮಾರ್, ಎಚ್.ವಿ.ಅಶ್ವತ್ಥ್, ಉಪನಿರ್ದೇಶಕರಾಗಿ ಎಂ.ಬಸವರಾಜ್, 13 ಮಂದಿ ಸಹಾಯಕ ಅಭಿಯಂತರರನ್ನು ನಿಯೋಜಿಸಲಾಗಿದೆ. ಅದೇ ರೀತಿ ದಕ್ಷಿಣ ವಿಭಾಗಕ್ಕೆ ಅಧಿಕಾರಿಗಳನ್ನು ನೇಮಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಗರ ಯೋಜನೆ ಕೋಶಕ್ಕೆ ಅಪರ ನಿರ್ದೇಶಕರಾಗಿ ಎಸ್.ಎಲ್.ರಾಜಣ್ಣ, ಜಂಟಿ ನಿರ್ದೇಶಕರಾಗಿ ವೆಂಕಟ್ ದುರ್ಗಾ ಪ್ರಸಾದ್, ಉಪನಿರ್ದೇಶಕರು ವಿ.ಉದಯ್‍ಶಂಕರ್, ನಾಲ್ಕು ಮಂದಿ ಸಹಾಯಕ ನಿರ್ದೇಶಕರನ್ನು ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Facebook Comments