ಕೆರೆ ಏರಿ ಒಡೆದು ಗ್ರಾಮಗಳಿಗೆ ನುಗ್ಗಿದ ನೀರು, ಬಿಬಿಎಂಪಿಯಿಂದ ತಾತ್ಕಾಲಿಕ ಪರಿಹಾರ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ದೊಡ್ಡ ಬಿದರಕಲ್ಲು ಕೆರೆ ಕೋಡಿ ಒಡೆದು ನಾಲ್ಕು ಗ್ರಾಮಗಳು ಜಲಾವೃತಗೊಂಡು ಸುತ್ತಮುತ್ತಲ ನಿವಾಸಿಗಳು ರಾತ್ರಿ ಇಡೀ ಪರದಾಡುವಂತಾಯಿತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ದೊಡ್ಡಬಿದರಕಲ್ಲು ಕೆರೆ ತುಂಬಿ ತುಳುಕುತ್ತಿದ್ದು , ನಿನ್ನೆ ತಡರಾತ್ರಿ ಏಕಾಏಕಿ ಕೆರೆ ಏರಿ ಕುಸಿದು ಬಿದ್ದು ಸುತ್ತಮುತ್ತಲ ಗ್ರಾಮಗಳಾದ ಭವಾನಿನಗರ, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರ ಬಡಾವಣೆ ಹಾಗೂ ಅಂದಾನಪ್ಪ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಏರಿ ಕುಸಿತದಿಂದ ಇಡೀ ಕೆರೆ ನೀರು ಏಕ ಕಾಲಕ್ಕೆ ಸುತ್ತಮುತ್ತಲ ನಾಲ್ಕು ಗ್ರಾಮಗಳಿಗೆ ನುಗ್ಗಿದ್ದರಿಂದ ಜನ ತಡಬಡಾಯಿಸುವಂತಾಯಿತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆಗಳೆಲ್ಲಾ ಕೆರೆಗಳಂತಾಗಿ ವಾಹನ ಸಂಚಾರಕ್ಕೆ ಅಸಾಧ್ಯವಾಯಿತು. ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಹೋದವು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ಇಡೀ ಕೆಲವರು ಜಾಗರಣೆ ನಡೆಸುವಂತಾಯಿತು.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು 8 ಜೆಸಿಬಿಗಳ ಮೂಲಕ ಪರಿಹಾರ ಕಾರ್ಯ ಕೈಗೊಂಡರು. ಭಾರೀ ನೀರಿದ್ದ ಪರಿಣಾಮ ಏರಿ ಕುಸಿತ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದರೂ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಸಿಬ್ಬಂದಿ ಪಂಪ್‍ಸೆಟ್‍ಗಳ ಮೂಲಕ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಹರಸಾಹಸ ಪಟ್ಟರು.
ಸುದ್ದಿ ತಿಳಿಯುತ್ತಿದ್ದಂತೆ ಮೇಯರ್ ಗೌತಮ್‍ಕುಮಾರ್, ಆಯುಕ್ತ ಅನಿಲ್‍ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚೆಗೆ ದೊಡ್ಡ ಬಿದರಕಲ್ಲು ಕೆರೆ ಬಿಬಿಎಂಪಿ ವ್ಯಾಪ್ತಿಗೆ ಬಂದಿರುವ ಹಿನ್ನೆಲೆಯಲ್ಲಿ ಕುಸಿತಗೊಂಡಿರುವ ಏರಿ ದುರಸ್ತಿ ಕಾರ್ಯ ಹಾಗೂ ಆಗಿರುವ ಅನಾಹುತವನ್ನು ಪಾಲಿಕೆಯಿಂದಲೇ ಪರಿಹರಿಸಲಾಗುವುದು ಎಂದು ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು. ಕೆರೆ ನೀರು ನುಗ್ಗಿ ಮನೆಗಳಿಗೆ ಆಗಿರುವ ಅನಾಹುತವನ್ನು ಪರಿಶೀಲಿಸಿ ವರದಿ ನೀಡುವಂತೆ ಕಂದಾಯ ಪರಿವೀಕ್ಷಕರಿಗೆ ಸೂಚನೆ ನೀಡಿದ್ದೇನೆ. ಅದೇ ರೀತಿ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಆಹಾರ ಸರಬರಾಜು ಮಾಡಲಾಗುತ್ತಿದೆ.

ಮಳೆಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲಾಗಿದ್ದು , ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅನಿಲ್‍ಕುಮಾರ್ ಭರವಸೆ ನೀಡಿದರು.

ಗೋಡೆ ಕುಸಿತ: ನೀರು ನುಗ್ಗಿದ ರಭಸಕ್ಕೆ ಶೆಟ್ಟಿಹಳ್ಳಿ ವಾರ್ಡ್‍ನ ನಂಜಮ್ಮ ಎಂಬುವರ ಮನೆ ಗೋಡೆ ಕುಸಿದು ಬಿದ್ದು ಭಾರೀ ಅನಾಹುತ ಸಂಭವಿಸಿದೆ. ಮನೆಯಲ್ಲಿದ್ದ ಮಂಚ, ಟಿವಿ, ಗೃಹೋಪಯೋಗಿ ವಸ್ತುಗಳು ನೀರಿನಿಂದ ಹಾನಿಯಾಗಿದೆ.

ಮೇಯರ್‍ಗೆ ತರಾಟೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಮೇಯರ್ ಗೌತಮ್‍ಕುಮಾರ್ ಅವರನ್ನು ಭವಾನಿ ನಗರದ ನಿವಾಸಿಗಳು ತರಾಟೆಗೆ ತೆಗೆದುಕೊಂಡರು.ಕಳೆದ ಹಲವಾರು ವರ್ಷಗಳಿಂದ ನಾವು ರಸ್ತೆ ದುರಸ್ತಿಗೊಳಿಸಿ, ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿ ಗೌತಮ್‍ಕುಮಾರ್ ವಿರುದ್ಧ ಘೋಷಣೆ ಕೂಗಿದರು.

ಒತ್ತುವರಿ ಕಾರಣ: ನೂರಾರು ಎಕರೆ ವಿಸ್ತೀರ್ಣದಲ್ಲಿದ್ದ ದೊಡ್ಡ ಬಿದರಕಲ್ಲು ಕೆರೆ ಸುತ್ತಮುತ್ತಲ ಪ್ರದೇಶವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಸ್ತಾರವಾಗಿದ್ದ ಕೆರೆ ಕಿಷ್ಕಿಂದೆಯಂತಾಗಿತ್ತು. ರಾಜ ಕಾಲುವೆಗಳ ನೀರು ಕೆರೆ ಸೇರುತ್ತಿತ್ತು. ಆದರೆ ಹೆಚ್ಚುವರಿ ನೀರು ಹೊರ ಹರಿದು ಹೋಗಲು ಸಾಧ್ಯವಿಲ್ಲದೆ ಇಡೀ ಕೆರೆ ಮಲಿನವಾಗಿತ್ತು.

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಳ ಹರಿವು ಹೆಚ್ಚಾದ ಪರಿಣಾಮ ಏರಿ ಕುಸಿದು ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ಕೆರೆ ಒತ್ತುವರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Facebook Comments