ಕಚೇರಿಗಳಿಗೆ ಮೇಯರ್ ದಿಢೀರ್ ಭೇಟಿ, ಸಿಬ್ಬಂದಿಗೆ ಸ್ಯಾಲರಿ ಕಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ಮೇಯರ್ ಗೌತಮ್‍ಕುಮಾರ್ ಜೈನ್ ಇಂದು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಆವರಣದಲ್ಲಿರುವ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿ ಗೈರು ಹಾಜರಾದ ಅಧಿಕಾರಿಗಳ ವೇತನ ಕಡಿತ ಮಾಡುವಂತೆ ಆದೇಶಿಸಿದರು. ಮೊದಲಿಗೆ ಜಯನಗರ ಶಾಪಿಂಗ್ ಕಾಂಪ್ಲೆ  ಹೊಸ ಕಟ್ಟಡ ನಿರ್ಮಾಣದ ಬಳಿ ದುರಸ್ತಿ ಕಾರ್ಯ ಸರಿಯಾಗಿ ಮಾಡದೆ ಇರುವುದು ಹಾಗೂ ಕಾಂಪ್ಲೆಕ್ಸ್ ಮುಂಭಾಗ ಕಸ ಬಿದ್ದಿರುವುದನ್ನು ಕಂಡು ಸ್ಥಳದ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಮೇಯರ್ ಚಳಿ ಬಿಡಿಸಿದರು.

ಕಾಂಪ್ಲೆಕ್ಸ್ ಆವರಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಕವರ್‍ಗಳು ಆವರಣದಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ವ್ಯಾಪಾರಿಗಳು ಸ್ವಚ್ಛತೆ ಕಾಪಾಡದೆ ಇದ್ದರೆ ಅಂಗಡಿಯವರಿಗೆ ದಂಡ ವಿಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು. ಕಂದಾಯಾಧಿಕಾರಿ ಹಾಗೂ ಮಾರುಕಟ್ಟೆ ವಿಭಾಗದ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕವನ್ನು ಗೌತಮ್‍ಕುಮಾರ್ ಪರಿಶೀಲಿಸಿದರು. ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು. ಗೈರು ಹಾಜರಾಗಿರು ವವರಿಗೆ ಶೋಕಾಸ್ ನೋಟಿಸ್ ಜರಿ ಗೊಳಿಸುವಂತೆ ಆದೇಶಿಸಿದರು.

ಮುಖ್ಯ ಅಭಿಯಂತರರ ವೇತನ ಕಡಿತಕ್ಕೆ ಸೂಚನೆ: ನಂತರ ಬೃಹತ್ ನೀರುಗಾಲುವೆ ವಿಭಾಗದ ಕಚೇರಿಗೆ ಭೇಟಿ ನೀಡಿ ಅಲ್ಲೂ ಹಾಜರಾತಿ ಪುಸ್ತಕ ಪರಿಶೀಲಿಸಿ ಹಾಜರಾತಿ ಹಾಕದಿರುವುದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದರು. ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರರು ಅಕ್ಟೋಬರ್‍ನಲ್ಲಿ ಒಂದು ದಿನವೂ ಹಾಜರಾತಿ ಹಾಕಿಲ್ಲದಿರುವುದನ್ನು ಕಂಡು ಗೈರು ಹಾಜರಿ ಎಂದು ನಮೂದಿಸಿ ಅಷ್ಟುದಿನದ ವೇತನವನ್ನು ಕಡಿತಗೊಳಿಸುವಂತೆ ಸೂಚನೆ ನೀಡಿದರು.

ಚಲನ ವಲನ ಪುಸ್ತಕದಲ್ಲಿ ಸ್ಥಳ ತಪಾಸಣೆ ಮಾಹಿತಿಯನ್ನು ನಿತ್ಯವೂ ನಮೂದಿಸಬೇಕು. ಆದರೆ, ನಮೂದಿಸದಿರುವುದರಿಂದ ಹಣಕಾಸು ವಿಭಾಗದ ವಿಶೇಷ ಆಯುಕ್ತರಿಗೆ ಕರೆ ಮಾಡಿ ಒಂದು ವಾರದ ವೇತನ ಕಡಿತಗೊಳಿಸಲು ಸೂಚನೆ ನೀಡಿದರು. ಹೊಸ ಕಾಂಪ್ಲೆಕ್ಸ್‍ನ ಪಾರ್ಕಿಂಗ್ ಜಗದಲ್ಲಿ ತಾತ್ಕಾಲಿಕವಾಗಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಉದ್ದಿಮೆ ಪರವಾನಗಿ ಕೊಟ್ಟಿಲ್ಲ. ಪಾರ್ಕಿಂಗ್ ಸ್ಥಳದಲ್ಲಿ ಶಾಶ್ವತ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಇದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಅಧಿಕಾರಿಯನ್ನು ಮೇಯರ್ ತರಾಟೆಗೆ ತೆಗೆದುಕೊಂಡರು. ಇಲ್ಲಿ ನಿರ್ಮಿಸಿರುವ ಎಲ್ಲಾ ಮಳಿಗೆಗಳಿಗೆ ಬೀಗ ಜಡಿಯುವಂತೆ ಆದೇಶಿಸಿ, ಅನಧಿಕೃತ ಮಳಿಗೆಗಳನ್ನೆಲ್ಲ ಕೂಡಲೆ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಥಳೀಯ ಸದಸ್ಯರಾದ ನಾಗರಾಜು ಅವರು ಮಹಾಪೌರರಿಗೆ ಮಾಹಿತಿ ನೀಡಿದರು.
ತಪಾಸಣೆ ವೇಳೆ ಉಪಮೇಯರ್ ಮೋಹನ್‍ರಾಜ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

Facebook Comments