ಸಬ್‍ರಿಜಿಸ್ಟ್ರಾರ್ ಕಚೇರಿಗಳ ಆನ್‍ಲೈನ್ ಅವ್ಯವಹಾರ : ತನಿಖೆಗೆ ಮಹಾ ನಿರೀಕ್ಷಕರಿಂದ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆನ್‍ಲೈನ್ ಮೂಲಕ ನಡೆಯುವ ಆಸ್ತಿ ಮತ್ತಿತರ ನೋಂದಣಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಖುದ್ದು ನೋಂದಣಿ ವಿಭಾಗದ ಮಹಾನಿರೀಕ್ಷಕರಾದ ತ್ರಿಲೋಕ್ ಚಂದ್ರ ಅವರೇ ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಆಸ್ತಿಯನ್ನು ನೋಂದಣಿ ಮಾಡಿಸಲಾಗುತ್ತಿದೆ. ಈ ಹಗರಣದಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇದನ್ನು ತಡೆಗಟ್ಟಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಪ್ಪತ್ತಕ್ಕೂ ಹೆಚ್ಚು ಸಬ್‍ರಿಜಿಸ್ಟ್ರಾರ್‍ಗಳು ಆನ್‍ಲೈನ್ ನೋಂದಣಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇದೊಂದು ಬೃಹತ್ ಜಾಲವಾಗಿದ್ದು, ಇದನ್ನು ಭೇದಿಸಲು ಸೈಬರ್‍ಕ್ರೈಂನಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ರಾಜಸ್ವ ಸಂಗ್ರಹಕ್ಕೆ ಮೂಲಾಧಾರ ವಾಗಿರುವ ಸಬ್‍ರಿಸ್ಟ್ರಾರ್ ಕಚೇರಿ ವ್ಯವಹಾರ ಪಾರದರ್ಶಕವಾಗಿ ನಡೆಸಬೇಕು.

ದಲ್ಲಾಳಿಗಳ ವ್ಯವಹಾರವನ್ನು ತಪ್ಪಿಸಬೇಕು ಎಂಬ ನಿಟ್ಟಿನಲ್ಲಿ ಆನ್‍ಲೈನ್ ರಿಜಿಸ್ಟ್ರಾರ್ ವ್ಯವಸ್ಥೆ ಜಾರಿಗೆ ತರಲಾಯಿತು. ಆದರೆ, ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಕಳ್ಳರು ರಂಗೋಲೆ ಕೆಳಗೆ ನುಸುಳುವ ಚಾಲಾಕಿತನ ಹೊಂದಿರುತ್ತಾರೆ.

ಆನ್‍ಲೈನ್ ವ್ಯವಹಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರೂ.ಗಳನ್ನು ವಂಚಿಸಿ ಅವ್ಯವಹಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನೋಂದಣಿ ವಿಭಾಗದ ಮಹಾನಿರೀಕ್ಷಕರೇ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿರುವುದು ವಿಶೇಷವಾಗಿದೆ. ತನಿಖೆ ನಡೆಸಿ ಕ್ರಮ ಕೈಗೊಂಡರೆ ಇದು ಯಾವ ಹಂತಕ್ಕೆ ಬಂದು ತಲುಪುತ್ತದೆಯೋ ಕಾದು ನೋಡಬೇಕಿದೆ.

Facebook Comments