ಶೇ.2ರಷ್ಟು ಭೂಸಾರಿಗೆ ತೆರಿಗೆ ವಿಚಾರ ಹಿಂಪಡೆದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.29-ಕಾಂಗ್ರೆಸ್ ಸದಸ್ಯರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಶೇ.2ರಷ್ಟು ಭೂ ಸಾರಿಗೆ ತೆರಿಗೆ ವಿಧಿಸುವುದನ್ನು ಬಿಬಿಎಂಪಿ ವಾಪಸ್ ಪಡೆದಿದೆ. ಸಭೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಹಿರಿಯ ಸದಸ್ಯ ಶಿವರಾಜು ಮತ್ತಿತರರು ಶೇ.2ರಷ್ಟು ಭೂ ಸಾರಿಗೆ ತೆರಿಗೆ ವಿಧಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಮೈತ್ರಿ ಆಡಳಿತವಿದ್ದಾಗಲೇ ನಾವು ಭೂಸಾರಿಗೆ ತೆರಿಗೆ ವಿಧಿಸಲು ಮುಂದಾಗಿದ್ದೆವು. ಆಗ ನೀವು ಆಕ್ಷೇಪಿಸಿದ್ದೀರಿ. ಜನರಿಗೆ ಹೊರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಈ ತೆರಿಗೆಯನ್ನು ನಾವು ವಾಪಸ್ ಪಡೆದಿದ್ದೆವು. ಈಗಾಗಲೇ ನಗರದ ಜನತೆ ಶೇ.24ರಷ್ಟು ತೆರಿಗೆ ಕಟ್ಟುತ್ತಿದ್ದಾರೆ. ಇದೇ ಹೊರೆಯಾಗಿದೆ. ಇದರ ಜೊತೆಗೆ ಶೇ.2ರಷ್ಟು ಭೂಸಾರಿಗೆ ಕರ ಹಾಕುವ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿದ್ದೀರಿ. ಕೂಡಲೇ ಇದನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಭೂ ಸಾರಿಗೆ ಕರ ವಸೂಲಿ ವಿಚಾರ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದಾಗ ಮೇಯರ್ ಗೌತಮ್‍ಕುಮಾರ್ ಪ್ರತಿಭಟನೆಗೆ ಮಣಿದು, ಭೂ ಸಾರಿಗೆ ತೆರಿಗೆ ವಿಚಾರವನ್ನು ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ಪ್ರಕಟಿಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.

Facebook Comments