ಬಿಬಿಎಂಪಿ ಗುತ್ತಿಗೆದಾರರ ಕೋಟ್ಯಾಂತರ ರೂ. ಲಪಟಾಯಿಸಿದ ಆರೋಪಿಗಳ ವಿರುದ್ಧ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

ಬಿಬಿಎಂಪಿ ಅವ್ಯವಹಾರ : ಬ್ಯಾಂಕ್ ಮತ್ತು ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲು
ಬೆಂಗಳೂರು, ಫೆ. 13- ಬಿಬಿಎಂಪಿ ಕಾಮಗಾರಿಯ ಹಣ ಡ್ರಾ ಮಾಡುವಾಗ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ 4.42 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಹಗರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಲೆಕ್ಕ ಅಧೀಕ್ಷರು, ಒಬ್ಬ ದ್ವಿತೀಯ ದರ್ಜೆ ಸಹಾಯಕ ಮತ್ತು ಎರಡು ಬ್ಯಾಂಕ್‍ಗಳ ವ್ಯವಸ್ಥಾಪಕರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ ಎಫ್‍ಐಆರ್ ದಾಖಲಿಸಿದೆ.

ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಡಾ. ಗೋವಿಂದರಾಜು ಅವರು ನೀಡಿದ ದೂರು ಆಧರಿಸಿ ಲೆಕ್ಕ ಅಧೀಕ್ಷಕರಾದ ರಾಮಮೂರ್ತಿ ಆರ್., ಅನಿತಾ, ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ, ಹಣ ಸ್ವೀಕರಿಸಿ ಡ್ರಾ ಮಾಡಿಕೊಳ್ಳಲು ಸಹಕರಿಸಿದ ಎಚ್‍ಡಿಎಫ್‍ಸಿ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ನÀ ವ್ಯವಸ್ಥಾಪಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಮಹಾದೇವಪುರ ವಿಭಾಗದಲ್ಲಿ 2,21,43,095 ಮತ್ತು 2,21,39, 456 ಕೋಟಿ ರೂ.ಗಳ ಎರಡು ಕಾಮಗಾರಿಗಳನ್ನು ಗುತ್ತಿಗೆದಾರರೊಬ್ಬರು ನಿರ್ವಹಿಸಿದ್ದರು. ಅದಕ್ಕೆ ಬಿಲ್ ಪಾವತಿ ಮಾಡುವಾಗ ಗುತ್ತಿಗೆದಾರರು ಸಲ್ಲಿಸಿದ್ದ ಕ್ಯಾನ್ಸಲ್ಡ್ ಚೆಕ್‍ನಲ್ಲಿದ್ದ ಖಾತೆಯ ವಿವರಕ್ಕೆ ಹಣ ಪಾವತಿ ಮಾಡುವ ಬದಲು ದಿಢೀರ್ ಎಂದು ಎಚ್‍ಡಿಎಫ್‍ಸಿ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ಹೊಸದಾಗಿ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ.

ಪ್ರಕರಣ ವಿಚಾರಣೆ ನಡೆದ ವೇಳೆ ಲೆಕ್ಕ ಅಧೀಕ್ಷಕರಾದ ರಾಮಮೂರ್ತಿ ಅವರು ಜನವರಿ 29 ರಿಂದ 30ರವರೆಗೆ ರಜೆ ಇದ್ದು, ಸಿಬಿಆರ್ ಪಾಸ್‍ವರ್ಡ್ ಅನ್ನು ತಮ್ಮ ಸಹೋದ್ಯೋಗಿ ಅನಿತಾ ಅವರಿಗೆ ನೀಡಿದ್ದಾಗಿ ತಾವು ರಜೆ ಮುಗಿಸಿ ಬಂದ ಬಳಿಕವೂ ಅದನ್ನು ಬದಲಾಯಿಸದೆ ಅವರಲ್ಲೇ ಬಿಟ್ಟಿದ್ದಾಗಿ ಹೇಳಿಕೆ ನೀಡಿದ್ದಾರೆ.

ಈ ಪಾಸ್‍ವರ್ಡ್ ಅನ್ನು ದುರುಪಯೋಗಪಡಿಸಿಕೊಂಡು ಅನಿತಾ ಅವರು ಗುತ್ತಿಗೆದಾರರು ಸಲ್ಲಿಸಿದ್ದ ಖಾತೆಯ ವಿವರಗಳನ್ನು ಏಕಾಏಕಿ ಬದಲಾವಣೆ ಮಾಡಿದ್ದಾರೆ ಮತ್ತು ಬದಲಾವಣೆ ಆದ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅವರು ಮುಖ್ಯ ಲೆಕ್ಕಾಧಿಕಾರಿಗಳ ನಿದರ್ಶನ ಇಲ್ಲದೆ ಇದ್ದರೂ ಅಧಿಕಾರಿಗಳು ಹೇಳಿದ್ದಾರೆ ಎಂದು ಕೆನರಾ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿ ಆರ್‍ಟಿಜಿಎಸ್ ಮೂಲಕ ನಿಧಿ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.

ಆರೋಪಿಗಳ ವಿರುದ್ಧ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976, ಸೆಕ್ಷನ್ 431, 441 ಮತ್ತು ಐಪಿಸಿ 409 ಮತ್ತು 420ರ ಅಡಿ ಎಫ್‍ಐಆರ್ ದಾಖಲಿಸಿರುವ ಬಿಎಂಟಿಎಫ್ ಪೊಲೀಸರು ಆರೋಪಿಗಳನ್ನು ಬಂಧಿಸಿ 4ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮುಂದಾಗಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಮಾಹಿತಿ ಹಕ್ಕು ಅಧ್ಯಾಯನ ಕೇಂದ್ರದ ಅಧ್ಯಕ್ಷ ಅಮರೇಶ್ ಆಗ್ರಹಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ತಕ್ಷಣ ಶಿಕ್ಷೆ ನೀಡಿದಂತಾಗುವುದಿಲ್ಲ, ಜಾಮೀನಿನ ಮೇಲೆ ಹೊರ ಬರುತ್ತಾರೆ ಪ್ರಕರಣ ಇತ್ಯರ್ಥವಾಗಿ ತೀರ್ಪು ಬರಲು ಸಾಕಷ್ಟು ಸಮಯ ಬೇಕಾಗುತ್ತದೆ, ಅದಕ್ಕೂ ಮೊದಲು ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Facebook Comments