ಬಿಬಿಎಂಪಿಯಲ್ಲಿ ಕೊರೊನಾ ಕಟ್ಟೆಚ್ಚರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊರೋನ ವೈರಸ್ ಹಾವಳಿ ಬಿಬಿಎಂಪಿಯನ್ನು ಕೆಂಗೆಡಿಸಿದ್ದು, ಸೋಂಕು ಉಲ್ಬಣಿಸದಂತೆ ಮೇಯರ್ ಗೌತಮ್ ಕುಮಾರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.  ಆಯುಕ್ತ ಅನಿಲ್‍ಕುಮಾರ್ ಮತ್ತಿತರರ ಅಧಿಕಾರಿಗಳೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಎಲ್ಲ ಅಧಿಕಾರಿಗಳ ಕಚೇರಿಗಳಿಗೂ ಇಂದು ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಹಾವಳಿ ತಡಗಟ್ಟಲು ರಾಜ್ಯ ಸ ರ್ಕಾರ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದೆ. ನಮ್ಮ ಬಿಬಿಎಂಪಿ ಆವರಣದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.  ಬಿಬಿಎಂಪಿ ಕೇಂದ್ರ ಕಚೇರಿ ಮುಖ್ಯದ್ವಾರದಲ್ಲೂ ನಾವು ಸ್ಯಾನಿಟೈಸರ್ ಕಡ್ಡಾಯಗೊಳಿಸಿದ್ದೇವೆ. ಪಾಲಿಕೆಯ ಪ್ರತಿ ಕಚೇರಿಯಲ್ಲೂ ಸ್ಯಾನಿಟೈಸರ್ ಕಡ್ಡಾಯವಾಗಿದೆ.

ಯಾರೇ ಬಂದರೂ ಸ್ಯಾನಿಟೈಸರ್ ಬಳಸಿಯೇ ಒಳಬರುವಂತೆ ಸೂಚನೆ ನೀಡಲಾಗಿದ್ದು, ಸ್ವಚ್ಚತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದೇವೆ ಎಂದು ಹೇಳಿದರು.  ಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರು ಯಾವಾಗೆಂದರೆ ಆವಾಗ ಬರುತ್ತಿದ್ದರು. ಕೊರೋನಾ ವೈರಸ್ ತಡೆಗೆ ಕ್ರಮ ಕೈಗೊಂಡಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಇನ್ನು ಮುಂದೆ ಕಡ್ಡಾಯವಾಗಿ ಮಧ್ಯಾಹ್ನ 3 ಗಂಟೆಯಿಂದ 5ರವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಹೇಳಿದರು.

ತುರ್ತು ಕಾರ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪತ್ರ ತಂದರೆ ಮಾತ್ರ ಅವರನ್ನು ಒಳಬಿಡಲಾಗುತ್ತದೆ ಎಂದರು.  ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದೇವೆ. 1ನೇ ಹಂತದಲ್ಲಿ ಭದ್ರತಾ ಸಿಬ್ಬಂದಿ ಅವರು ಪರಿಶೀಲನೆ ನಡೆಸಿ, ಸ್ಯಾನಿಟೈಸರ್ ಹಾಕಿಕೊಂಡೇ ಹೋಗುವಂತೆ ಸೂಚನೆ ನೀಡಲಾಗುತ್ತದೆ. 2ನೇ ಹಂತದಲ್ಲಿ ಮಾರ್ಷಲ್‍ಗಳನ್ನು ನಿಯೋಜಿ ಸಿದ್ದು, ಅವರು ಅನಗತ್ಯವಾಗಿ ಪಾಲಿಕೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಪತ್ತೆಹಚ್ಚಿ ಆವರಣದಿಂದ ಹೊರಗಡೆ ಕಳುಹಿಸುತ್ತಾರೆ.

3ನೇ ಹಂತದಲ್ಲಿ ಯಾವುದೇ ಅಧಿಕಾರಿಗಳು ಮತ್ತು ಕಚೇರಿಗೆ ಪ್ರವೇಶಿಸುವ ಸಾರ್ವಜನಿಕರು ಕೈಗೆ ಗ್ಲೌಸ್‍ಗಳನ್ನು ಧರಿಸಿರಬೇಕು ಎಂಬುದನ್ನು ಕಡ್ಡಾಯಗೊಳಿಸಿದ್ದೇವೆ ಎಂದರು. ಸಭೆ ಸಮಾರಂಭಗಳನ್ನು ರದ್ದುಪಡಿಸಿದ್ದು, ಮಾ.30ರೊಳಗೆ ನಾವು ಬಜೆಟ್ ಮಂಡನೆ ಮಾಡಲಿದ್ದೇವೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅವಕಾಶ ವಿರುವುದಿಲ್ಲ. ಅಧಿಕಾರಿಗಳು, ಮಾಧ್ಯಮಿತ್ರರು, ಕೌನ್ಸಿಲರ್‍ಗಳಿಗೆ ಮಾತ್ರ ಅವಕಾಶವಿರುತ್ತದೆ.

ಇವರೆಲ್ಲರನ್ನೂ ಪ್ರವೇಶದ್ವಾರದಲ್ಲೇ ಥರ್ಮೋ ಸ್ಕ್ಯಾನರ್ ಮೂಲಕ ಜ್ವರ ಇದೆಯೇ ಎಂಬುದನ್ನು ಪತ್ತೆಹಚ್ಚಿ, ಜ್ವರ ಇದ್ದವರನ್ನು ನಿರ್ಧಾಕ್ಷಿಣ್ಯವಾಗಿ ಹೊರಕಳುಹಿಸಲಾಗುವುದು ಎಂದು ಅವರು ಹೇಳಿದರು.  ಇತ್ತೀಚಿನ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ನಗರದಲ್ಲಿ ಎಲ್ಲೂ ಅಷ್ಟೂ ಕೊರೋನಾ ಉಲ್ಭಣವಾಗಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಪಾಲಿಕೆ ಆವರಣದಲ್ಲಿರುವ ಎಲ್ಲಾ ಸ್ಥಳಗಳನ್ನು ಶುಚಿಯಾಗಿಟ್ಟುಕೊಂಡಿದ್ದೇವೆ. ಇದನ್ನು ಸಾರ್ವಜನಿಕರು ಕೂಡ ಪಾಲನೆ ಮಾಡಬೇಕೆಂದು ಮೇಯರ್ ಮನವಿ ಮಾಡಿದರು.

Facebook Comments