ಬಿಬಿಎಂಪಿ ಆಡಳಿತಾಧಿಕಾರಿಯಾಗಿ ರಾಕೇಶ್‍ಸಿಂಗ್ ನೇಮಕ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲು ಕೌಂಟ್ ಡೌನ್ ಶುರುವಾಗಿದ್ದು , ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಈಗಾಗಲೇ ತಯಾರಿ ಆರಂಭಿಸಿದ್ದು, ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ಹೆಸರನ್ನು ಅಂತಿಮಗೊಳಿಸಿದೆ.

ಈ ವರ್ಷ ಚುನಾವಣೆ ನಡೆಯದಿರುವುದು ನಿಶ್ಚಿತಗೊಂಡಿದ್ದು, ಮತದಾರರ ಹೆಸರು, ನೋಂದಣಿ ಹಾಗೂ ಪರಿಷ್ಕರಣೆಗೆ ಚಾಲನೆ ಸಿಕ್ಕಿದ್ದು, ಬರುವ ಜನವರಿವರೆಗೂ ಮುಂದುವರೆಯಲಿದೆ.

ಇದರ ನಡುವೆ ನಗರಾಭಿವೃದ್ಧಿ ಇಲಾಖೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸದ್ದಿಲ್ಲದೆ ತಯಾರಿ ನಡೆಸಿದೆ. ಮೂಲಗಳ ಪ್ರಕಾರ ಜಲಸಂಪನ್ಮೂಲ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರಾಕೇಶ್ ಸಿಂಗ್ ಅವರ ಹೆಸರು ಮುಂಚೂಣಿಯಲ್ಲಿದೆ.

ಜಲಸಂಪನ್ಮೂಲ ಇಲಾಖೆಯ ಅತ್ಯಂತ ಅನುಭವಿ ಹಾಗೂ ದಕ್ಷ ಅಧಿಕಾರಿಯೆಂದೇ ಹೆಸರು ಮಾಡಿರುವ ರಾಕೇಶ್ ಸಿಂಗ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಕೆಲವೊಂದು ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಈಗಾಗಲೇ ಹಿರಿಯ ಶಾಸಕ ಎಸ್.ರಘು ಅವರ ನೇತೃತ್ವದಲ್ಲಿ ನೇಮಿಸಿರುವ ಸಮಿತಿ ಮೂರು ಸುತ್ತಿನ ಸಭೆಗಳನ್ನು ನಡೆಸಿದ್ದು, ಬಂದಂತಹ ಸಲಹೆಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲು ಮುಂದಾಗುತ್ತಿದೆ. ಇದೆಲ್ಲದರ ನಡುವೆ ಆಡಳಿತಾಧಿಕಾರಿ ನೇಮಕ ಕುತೂಹಲ ಕೆರಳಿಸಲಿದೆ.

ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ , ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಸೇರಿದಂತೆ ಇನ್ನೂ ಹಲವಾರು ಕಾಮಗಾರಿಗಳು ಆರಂಭಗೊಳ್ಳುತ್ತಿದೆ. ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಕ್ತಾಯವಾದ ನಂತರ ಶಾಸಕರ ಕೈಗೆ ಎಲ್ಲಾ ಅಧಿಕಾರದ ದಂಡ ಸಿಗಲಿದೆ.

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ರಾಕೇಶ್ ಸಿಂಗ್ ಅವರು ಸಮರ್ಥರು ಎಂಬ ಭಾವನೆ ಇದ್ದು ಐಎಎಸ್ ವಲಯದಲ್ಲೂ ಭಾರೀ ಕುತೂಹಲ ಕೆರಳಿಸಿದೆ. ಪ್ರಸ್ತುತ ಪಾಲಿಕೆ ಆಯುಕ್ತರಾಗಿರುವ ಮಂಜುನಾಥ್ ಪ್ರಸಾದ್ ಅವರಿಗೂ ಕೂಡ ಬಡ್ತಿ ನೀಡಿ ಆಡಳಿತಾಧಿಕಾರಿ ಹುದ್ದೆಗೆ ತರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Facebook Comments