ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆದಂತಿದೆ ಬಿಬಿಎಂಪಿ ಪರಿಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎಂಬಂತಾಗಿದೆ ಬಿಬಿಎಂಪಿ ಆಡಳಿತ… ಜನಪ್ರತಿನಿಧಿಗಳ ಆಡಳಿತಾವಧಿ ಕೊನೆಗೊಂಡು ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕಗೊಂಡ ನಂತರ ಪಾಲಿಕೆಯ ಸ್ಥಿತಿ ಅಧೋಗತಿಗೆ ಇಳಿದಿದೆ. ಆಡಳಿತಾಧಿಕಾರಿ ಗೌರವ್ ಗುಪ್ತಾ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಅವರ ನಡುವೆ ಹೊಂದಾಣಿಕೆ ಇಲ್ಲದ ಪರಿಣಾಮ ಅಧಿಕಾರಿಗಳನ್ನು ಯಾರೂ ಕೇಳೋರಿಲ್ಲ ಎಂಬಂತಾಗಿದೆ.

ಅಧಿಕಾರಿಗಳನ್ನು ಕರೆದು ಗೌರವ್ ಗುಪ್ತಾ ಸಭೆ ನಡೆಸಿ ತಮ್ಮ ಇಚ್ಛೆಯಂತೆ ಆಡಳಿತ ನಡೆಸುತ್ತಿದ್ದರೆ, ಅತ್ತ ಮಂಜುನಾಥ್ ಪ್ರಸಾದ್ ಯಾರಿಗೂ ಹೇಳದೆ ನಗರ ಪರಿಶೀಲನೆಗೆ ತೆರಳುತ್ತಿರುವುದರಿಂದ ಗುಪ್ತಾ ಮತ್ತು ಮಂಜುನಾಥ್ ಪ್ರಸಾದ್ ಇದುವರೆಗೂ ಒಟ್ಟಾಗಿ ಸಭೆ ನಡೆಸಿದ ಉದಾಹರಣೆಯಿಲ್ಲ.

ಗೌರವ್ ಗುಪ್ತಾ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡ ದಿನ ಮಾತ್ರ ಮಂಜುನಾಥ್ ಪ್ರಸಾದ್ ಜತೆಗಿದ್ದರು. ಆ ನಂತರ ಅವರೊಂದು ದಿಕ್ಕು , ಇವರೊಂದು ದಿಕ್ಕು ಎಂಬಂತಾಗಿದೆ. ಇಬ್ಬರು ಅಧಿಕಾರಿಗಳ ಈ ಧೋರಣೆಯಿಂದ ಬಿಬಿಎಂಪಿಯಲ್ಲಿ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ.

ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡು ವಾರ ಕಳೆದರೂ ಮೇಯರ್, ಉಪ ಮೇಯರ್, ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಕಚೇರಿಗೆ ಇದುವರೆಗೂ ಬೀಗ ಜಡಿದಿಲ್ಲ.

ಕೇವಲ ನಾಮ ಫಲಕಗಳನ್ನು ಮಾತ್ರ ತೆರವುಗೊಳಿಸಿ ಕಚೇರಿಗಳನ್ನು ತೆರೆದಿರುವುದಲ್ಲದೆ ಆಯಾ ಕಚೇರಿಗಳ ಆಪ್ತ ಸಹಾಯಕರನ್ನು ಬೇರೆಡೆಗೆ ವರ್ಗಾಯಿಸಿಲ್ಲ. ಹೀಗಾಗಿ ಸ್ಥಾಯಿ ಸಮಿತಿಗಳ ಕಚೇರಿಗಳು ರಾಜಕೀಯ ಅಡ್ಡೆಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಮಧ್ಯಾಹ್ನದ ಮೇಲೆ ಕಚೇರಿಗಳಿಗೆ ಆಗಮಿಸುವ ರಾಜಕೀಯ ಮುಖಂಡರುಗಳು ಆಪ್ತ ಸಹಾಯಕರ ನೆರವಿನೊಂದಿಗೆ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡ ತಕ್ಷಣ ಎಲ್ಲಾ ಕಚೇರಿಗಳಿಗೂ ಬೀಗ ಜಡಿಯಬೇಕು. ಆಪ್ತ ಸಹಾಯಕರನ್ನು ಬೇರೆ ಕೆಲಸ, ಕಾರ್ಯಗಳಿಗೆ ತೆರಳುವಂತೆ ಸೂಚಿಸುವುದು ಕಡ್ಡಾಯ.  ಕೊರೊನಾ ಮಹಾಮಾರಿಯಂತಹ ಸಂದರ್ಭದಲ್ಲೂ ವಿವಿಧ ಸ್ಥಾಯಿ ಸಮಿತಿಗಳ ಆಪ್ತ ಸಹಾಯಕರು ಕೆಲಸವಿಲ್ಲದೆ ಸಮಿತಿಗಳಲ್ಲಿ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ.

ಅವರನ್ನು ಬೇರೆ ಕೆಲಸಗಳಿಗೆ ತೆರಳುವಂತೆ ಸೂಚಿಸುವ ಅಧಿಕಾರವಿರುವ ಕೌನ್ಸಿಲ್ ಕಾರ್ಯದರ್ಶಿ ಹಾಗೂ ಸಹಾಯಕ ಕೌನ್ಸಿಲ್ ಕಾರ್ಯದರ್ಶಿಗಳ ನಡುವೆಯೂ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ.

ಕೌನ್ಸಿಲ್ ಕಾರ್ಯದರ್ಶಿ ಹೇಮಂತ್ ಅವರು ತಮ್ಮ ಕಚೇರಿಯಲ್ಲಿ ಹಾಲಿ ಇರುವ ನೌಕರರನ್ನು ಬೇರೆಡೆ ವರ್ಗಾಯಿಸಿ ತಮಗೆ ಬೇಕಾದ ಸಿಬ್ಬಂದಿಯನ್ನು ನಿಯೋಜಿಸುವಂತೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಅತ್ತ ಸಹಾಯಕ ಕೌನ್ಸಿಲ್ ಕಾರ್ಯದರ್ಶಿ ರಾಮೇಗೌಡ ಅವರು ಹೇಮಂತ್ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಕೌನ್ಸಿಲ್ ಕಾರ್ಯಾಲಯದಲ್ಲೇ ಇಷ್ಟೆಲ್ಲಾ ರಾಜಕೀಯ ನಡೆಯುತ್ತಿದ್ದರೂ ಆಡಳಿತಾಧಿಕಾರಿಯಾಗಲೀ, ಆಯುಕ್ತರಾಗಲೀ ಗಮನ ಹರಿಸದಿರುವುದು ಪಾಲಿಕೆ ಆಡಳಿತ ಅಧೋಗತಿಗೆ ಇಳಿಯುವಂತೆ ಮಾಡಿದೆ.

ಕೇವಲ ಒಂದು ವಾರದಲ್ಲೇ ಬಿಬಿಎಂಪಿಯಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಇನ್ನು ಆರೇಳು ತಿಂಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆಯದಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂದು ಅಂದಾಜಿಸುವುದು ಕಷ್ಟವಾಗಲಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಪಾಲಿಕೆ ಆಡಳಿತದಲ್ಲಿನ ಲೋಪ ದೋಷಗಳನ್ನು ಸರಿಪಡಿಸುವತ್ತ ಚಿತ್ತ ಹರಿಸುವ ಅಗತ್ಯವಿದೆ.

Facebook Comments