ಮಳೆ ಪರಿಹಾರ ವಿತರಣೆಯಲ್ಲಿ ಯಡವಟ್ಟು ಮಾಡಿದ ಬಿಬಿಎಂಪಿ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.27- ಮಳೆ ಅನಾಹುತಕ್ಕೆ ಕಾರಣವಾಗುವ ಒತ್ತುವರಿಯನ್ನು ನಿರ್ದಾಕ್ಷಿಣ್ಯ ವಾಗಿ ತೆರವು ಮಾಡಲಾಗುವುದು ಎಂದು ಸಿಎಂ ಬೊಬ್ಬೆ ಹೊಡೆದಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಒತ್ತುವರಿ ಮಾಡಿಕೊಂಡಿರುವ ಮನೆಗಳಿಗೆ ಪರಿಹಾರ ನೀಡಿ ಯಡವಟ್ಟು ಮಾಡಿದ್ದಾರೆ. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಹೊಸಕೆರೆ ಹಳ್ಳಿಯ ದತ್ತಾತ್ರೇಯ ಬಡಾವಣೆ ಮತ್ತಿತರ ಪ್ರದೇಶಗಳಲ್ಲಿ ಭಾರೀ ಅನಾಹುತ ಸಂಭವಿಸಿತ್ತು.

ಮಳೆ ಸಂತ್ರಸ್ತರಿಗೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಯೋಜನೆಯಡಿ ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಇದೇ ರೀತಿ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿ ಗಳು ದತ್ತಾತ್ರೇಯ ಬಡಾವಣೆಯ 304 ಹಾಗೂ ಕುಮಾರಸ್ವಾಮಿ ಬಡಾವಣೆಯ 40 ಕುಟುಂಬ ಗಳಿಗೆ ತಲಾ 25 ಸಾವಿರ ರೂ. ಗಳ ಪರಿಹಾರ ಸೇರಿದಂತೆ ಸರಿ ಸುಮಾರು 84 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ನೀಡಿದ್ದರು.

ಆದರೆ ಅಶೋಕ್ ಅವರು ತಾವು ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆ ಪೀಡಿತರಿಗೆ ಮಾತ್ರ ಪರಿಹಾರ ಧನ ನೀಡಿದ್ದಾರೆ. ಅದರಲ್ಲೂ ಮಳೆ ಅನಾಹುತಕ್ಕೆ ಕಾರಣವಾದ ಒತ್ತುವರಿ ಮನೆಗಳನ್ನು ಗುರುತಿಸದೆ ಅವರಿಗೂ ಪರಿಹಾರ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ದತ್ತಾತ್ರೇಯ ಬಡಾವಣೆ , ಕುಮಾರಸ್ವಾಮಿ ಲೇ ಔಟ್‍ನಲ್ಲಿ ಮಳೆ ಅನಾಹುತ ಸಂಭವಿಸಲು ರಾಜ ಕಾಲುವೆ ಒತ್ತುವರಿಯೇ ಕಾರಣ. ಆದರೆ ಅವರಿಗೂ ಪರಿಹಾರ ಧನ ನೀಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಮಳೆ ಅನಾಹುತ ಸಂಭವಿಸಿದಾಗ ಎನ್‍ಡಿಆರ್‍ಎಫ್ ನೀತಿಯಂತೆ ಕೇವಲ 5,000ರೂ.ಗಳ ಪರಿಹಾರ ಧನ ನೀಡಲು ಅವಕಾಶವಿದೆ. ಆದರೆ ಸರ್ಕಾರ 25,000 ರೂ.ಗಳ ಪರಿಹಾರ ಧನ ನೀಡಿರುವುದೇ ಅಲ್ಲ ಒತ್ತುವರಿ ಮಾಡಿಕೊಂಡಿರುವವರಿಗೂ ಪರಿಹಾರ ಬಿಡುಗಡೆ ಮಾಡಿರುವುದು ಇದೀಗ ಎಡವಟ್ಟಾಗಿದೆ. ಮುಖ್ಯಮಂತ್ರಿಗಳು ದಸರಾ ಹಬ್ಬ ಮುಗಿಯು ತ್ತಿದ್ದಂತೆ ರಾಜಕಾಲುವೆ ಒತ್ತುವರಿದಾರರನ್ನು ಗುರುತಿಸಿ ಅವರಿಗೆ ನೋಟೀಸ್ ನೀಡಿ ನಿರ್ದಾಕ್ಷಿಣ್ಯವಾಗಿ ಒತ್ತುವರಿಯನ್ನು ತೆರವುಗೊಳಿಸಿ ಎಂದು ಸೂಚನೆ ನೀಡಿದ್ದಾರೆ.

ಇಂತಹ ಸಂದರ್ಭದಲ್ಲೇ ಒತ್ತುವರಿದಾರರಿಗೆ 25,000 ರೂ.ಗಳ ಪರಿಹಾರ ಬಿಡುಗಡೆ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ನಮಗ್ಯಾಕೆ ಇಲ್ಲ?: ನಗರದಲ್ಲಿ ಇಷ್ಟು ವರ್ಷ ಮಳೆ ಅನಾಹುತ ಸಂಭವಿಸಿದ್ದರೂ ಇದುವರೆಗೂ ಯಾರಿಗೂ ನಯಾ ಪೈಸೆ ಪರಿಹಾರ ಧನ ನೀಡದಿರುವ ಸರ್ಕಾರ ಇದೀಗ ಏಕಾಏಕಿ 25,000 ರೂ.ಗಳ ಪರಿಹಾರ ನೀಡಿರುವ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ.

ಇತ್ತೀಚೆಗೆ ಬಿದ್ದ ಮಳೆಯಿಂದ ದಾಸರಹಳ್ಳಿ, ಹೆಬ್ಬಾಳ, ಕೋರಮಂಗಲ ಮತ್ತಿತರ ಕ್ಷೇತ್ರಗಳಲ್ಲೂ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಸಂಭವಿಸಿದೆ. ಆದರೆ ಕಂದಾಯ ಸಚಿವರು ಪ್ರತಿನಿಧಿಸುವ ಪದ್ಮನಾಭ ನಗರ ಕ್ಷೇತ್ರಕ್ಕೆ ಮಾತ್ರ ಪರಿಹಾರ ಧನ ಹಂಚಿಕೆ ಮಾಡಲಾಗಿದೆ. ಆದರೆ ನಮ್ಮ ಪ್ರದೇಶಗಳಲ್ಲಿ ಆಗಿರುವ ಅನಾಹುತಗಳಿಗೆ ಪರಿಹಾರ ಏಕೆ ಬಿಡುಗಡೆ ಮಾಡಿಲ್ಲ ಎಂದು ಇತರ ಮಳೆ ಅನಾಹುತ ಪ್ರದೇಶಗಳ ಜನರು ಪ್ರಶ್ನಿಸಿದ್ದಾರೆ.

ಮಾನವೀಯತೆ ನೆಲೆಗಟ್ಟಿನಲ್ಲಿ ಪರಿಹಾರ:ನಗರದಲ್ಲಿ ಭಾರೀ ಮಳೆ ಬಿದ್ದು, ದತ್ತಾತ್ರೇಯ ವಾರ್ಡ್‍ನಲ್ಲಿ ಒತ್ತುವರಿ ಯಾದ ಜಾಗ ದಲ್ಲಿದ್ದ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾದ ಪರಿಣಾಮ ಮಾನವೀಯ ನೆಲೆಗಟ್ಟಿ ನಲ್ಲಿ ಪರಿಹಾರ ವನ್ನು ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನವೆಂಬರ್ ಅಂತ್ಯದವರೆಗೆ ಒತ್ತುವರಿ ತೆರವು ಮಾಡಬಾರದೆಂದು ನ್ಯಾಯಾಲಯದ ಆದೇಶವಿದೆ. ನವೆಂಬರ್ ನಂತರ ಒತ್ತುವರಿ ತೆರವು ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಪರಿಹಾರ ನೀಡಿರುವುದಕ್ಕೂ ಒತ್ತುವರಿಗೂ ಯಾವುದೇ ಸಂಬಂಧವಿಲ್ಲ. ಮಾನವೀಯತೆ ಹಿನ್ನೆಲೆಯಲ್ಲಿ ಪರಿಹಾರ ನೀಡಲಾಗಿದೆ. ಹಾಗೆಂದು ಮಾಡಿರುವ ಒತ್ತುವರಿಯನ್ನು ತೆರವು ಮಾಡದೆ ಬಿಡುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

Facebook Comments