ಕೊರೊನಾ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ ಕೈಬಿಟ್ಟ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಕೇವಲ 20 ನಿಮಿಷಗಳಲ್ಲಿ ಕೊರೊನಾ ಸೋಂಕು ವರದಿ ನೀಡುತ್ತಿದ್ದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಬಳಕೆ ಸ್ಥಗಿತಗೊಳಿಸಲು ಬಿಬಿಎಂಪಿ ತೀರ್ಮಾನಿಸಿದೆ.ಆ್ಯಂಟಿಜೆನ್ ಟೆಸ್ಟ್ ನಡೆಸಿದಾಗ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಆರ್‍ಟಿಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ವರದಿ ಬರುತ್ತಿತ್ತು. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಮಾತ್ರವಲ್ಲ, ಆ್ಯಂಟಿಜೆನ್ ಪರೀಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕೆಲವು ವ್ಯಕ್ತಿಗಳು ಆ್ಯಂಟಿಜೆನ್ ಪರೀಕ್ಷೆಗೊಳಗಾಗಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳದಿದ್ದರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿತ್ತು.ಆ್ಯಂಟಿಜೆನ್ ಪರೀಕ್ಷೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಇನ್ನು ಮುಂದೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ ಬಳಕೆ ಮಾಡದಿರಲು ತೀರ್ಮಾನಿಸಿದೆ.

ಆರಂಭದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿತ್ತು. ಆ ಸಂದರ್ಭದಲ್ಲಿ ಆರ್‍ಟಿಪಿಸಿಆರ್ ತಪಾಸಣೆಗೊಳಗಾದಾಗ ವರದಿಗಾಗಿ ಮೂರ್ನಾಲ್ಕು ದಿನಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಪಾಸಣೆಗೊಳಗಾದ ವ್ಯಕ್ತಿ ವರದಿ ಕೈ ಸೇರುವ ಮುನ್ನ ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯುವುದು ಅನಿವಾರ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಆತನಿಗೆ ಪಾಸಿಟಿವ್ ಬಂದರೆ ಕುಟುಂಬ ವರ್ಗದವರಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚಳವಾಗಿತ್ತು. ಹೀಗಾಗಿ ಕೊರೊನಾ ತಪಾಸಣೆ ನಡೆಸಿದ ಕೆಲವೇ ಗಂಟೆಗಳಲ್ಲಿ ವರದಿ ಕೈ ಸೇರುವಂತಹ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳನ್ನು ರಾಜ್ಯ ಸರ್ಕಾರ ಖರೀದಿಸಿತ್ತು.

ಆ್ಯಂಟಿಜೆನ್ ಟೆಸ್ಟ್ ಕಿಟ್ ಬಳಕೆ ನಂತರ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತಿತ್ತು. ಈ ಟೆಸ್ಟ್‍ನಲ್ಲಿ ಇತರ ಮಾದರಿಯ ಸೋಂಕು ಕಾಣಿಸಿಕೊಂಡರೂ ಪಾಸಿಟಿವ್ ವರದಿ ಬರುತ್ತಿತ್ತು. ಸಣ್ಣಪುಟ್ಟ ಜ್ವರ, ಮತ್ತಿತರ ಲಕ್ಷಣ ಹೊಂದಿದವರಿಗೂ ಕೊರೊನಾ ಪಾಸಿಟಿವ್ ವರದಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಇನ್ನು ಮುಂದೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳನ್ನು ಬಳಸದಿರಲು ತೀರ್ಮಾನಿಸಿದೆ.

ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳ ಬಳಕೆ ನಿಲ್ಲಿಸುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆಯೂ ಇಳಿಮುಖದತ್ತ ಸಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

Facebook Comments