ಬೆಂಗಳೂರಿನಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ 2 ಲಕ್ಷ ಮಂದಿ, 4 ಕೋಟಿ ದಂಡ ಸಂಗ್ರಹ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29- ನಗರದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದರೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಎರಡು ಲಕ್ಷದತ್ತ ಮುಖ ಮಾಡಿದೆ.ನಿಯಮ ಉಲ್ಲಂಘಿಸಿರುವವರಿಂದ ಇದುವರೆಗೂ 4 ಕೋಟಿಗೂ ಹೆಚ್ಚು ದಂಡ ಸಂಗ್ರಹ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮಾಸ್ಕ್ ಉಲ್ಲಂಘನೆ ಮಾಡಿರುವವರ ಸಂಬಂಧ 1,59,448 ಮಂದಿಗೆ ಮಾರ್ಷಲ್‍ಗಳು ತಲಾ 200ರೂ.ನಂತೆ ಮೂರೂವರೆ ಕೋಟಿ ರೂ. ದಂಡ ವಿಧಿಸಿದ್ದಾರೆ.

ದಂಡ ವಿಧಿಸಲು ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಮೂರೂವರೆ ಕೋಟಿ ದಂಡ ವಸೂಲಿ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದ 18,239 ಜನರಿಂದ 39.19 ಲಕ್ಷ ದಂಡ ಸಂಗ್ರಹ ಮಾಡಲಾಗಿದೆ.

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ಸಂಖ್ಯೆ 1,77,687ಕ್ಕೆ ಏರಿಕೆಯಾಗಿದ್ದು, ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದ್ದು, ಒಂದೆರಡು ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆ 2 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ.

ಈ ಹಿಂದೆ ನಿಯಮ ಉಲ್ಲಂಘಿಸುವವರಿಗೆ 1000ರೂ. ದಂಡ ವಿಧಿಸಲಾಗುತ್ತಿತ್ತು. ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು 200ರೂ.ಗಳಿಗೆ ಕಡಿತಗೊಳಿಸಲಾಗಿದೆ. ಇಲ್ಲದಿದ್ದರೆ ದಂಡದ ಪ್ರಮಾಣ 5 ಕೋಟಿ ರೂ. ದಾಟುವ ಸಾಧ್ಯತೆ ಇತ್ತು.

Facebook Comments