ಬಿಬಿಎಂಪಿ ಮತ್ತಷ್ಟು ಡಿಜಿಟಲ್, ಆನ್‌ಲೈನ್‌ನಲ್ಲೇ ಸಿಗಲಿದೆ ನಿಮ್ಮ ಆಸ್ತಿ ವಿವರ
ಬೆಂಗಳೂರು, ನ.13- ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸುವವರಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಬಿಬಿಎಂಪಿ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದೆ.
ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರು ಖಾತೆಗಾಗಿ ಬಿಬಿಎಂಪಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿಂದು ವಿವರಿಸಿದರು.
ಹಳೆ ಬೆಂಗಳೂರಿನ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ನೂರು ವಾರ್ಡ್‍ಗಳಲ್ಲಿ ಇ-ಆಸ್ತಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಾಯೋಗಿಕವಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ವಾರ್ಡ್‍ಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಇ-ಆಸ್ತಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯನ್ನು ಹಂತ ಹಂತವಾಗಿ ನೂರು ವಾರ್ಡ್‍ಗಳಿಗೆ ವಿತರಿಸಲಾಗುವುದು ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.
ಇ-ಆಸ್ತಿ ವ್ಯವಸ್ಥೆ ಜಾರಿಗೆ ಬಂದ ನಂತರ ಬಿಬಿಎಂಪಿ ಅಧಿಕಾರಿಗಳು ಕೈ ಬರಹದಲ್ಲಿ ಸಹಿ ಮಾಡಿರುವ ಖಾತಾ ಪತ್ರಗಳು ಹಾಗೂ ಖಾತಾ ಎಕ್ಸ್‍ಟ್ರಾಕ್ಟ್‍ಗಳನ್ನು ಬ್ಯಾನ್ ಮಾಡಿ ಡಿಜಿಟಲ್ ಖಾತಾ ಪತ್ರ ವಿತರಿಸಲಾಗುವುದು ಎಂದು ಹೇಳಿದರು. 2018ರಿಂದ ಸಕಾಲ ಯೋಜನೆಯಡಿ ನಗರದಲ್ಲಿ 2.87 ಲಕ್ಷಕ್ಕೂ ಹೆಚ್ಚು ಕೈ ಬರಹದ ಖಾತಾಗಳನ್ನು ವಿತರಿಸಲಾಗಿದೆ. ಡಿಜಿಟಲ್ ಖಾತಾ ವ್ಯವಸ್ಥೆ ಜಾರಿಗೆ ಬಂದ ನಂತರ ಕೈ ಬರಹದ ಯಾವುದೇ ದಾಖಲೆಗಳನ್ನು ನೀಡಲಾಗುವುದಿಲ್ಲ.
ಆಸ್ತಿ ಮಾಲೀಕರ ಭಾವಚಿತ್ರ ಸೇರಿದಂತೆ 18 ವಿಷಯಗಳಿಗೆ ಸಂಬಂಧಿಸಿದ 46 ಅಂಶಗಳನ್ನೊಳಗೊಂಡು ಅಧಿಕಾರಿಗಳ ಡಿಜಿಟಲ್ ಸಹಿ ಇರುವ ಡಿಜಿಟಲ್ ಖಾತಾಗಳನ್ನು ವಿತರಿಸಲಾಗುವುದು. ಇದು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವುದನ್ನು ತಪ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಡಿಜಿಟಲ್ ಖಾತಾ ಪತ್ರಗಳನ್ನು ಸಾರ್ವಜನಿಕರು ಡಿಜಿ ಲಾಕರ್ ಮೂಲಕವೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಇನ್ನು ಮುಂದೆ ಒಂದು ಆಸ್ತಿಯನ್ನು ಮತ್ತೊಬ್ಬರು ಖರೀದಿ ಮಾಡಿ ನೋಂದಣಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಖಾತಾ ಮತ್ತು ಎಕ್ಸ್‍ಟ್ರಾಕ್ಟ್‍ಗಳನ್ನು ಅಧಿಕಾರಿಗಳಿಗೆ ನೀಡುವ ಪ್ರಮೇಯವೇ ಬರುವುದಿಲ್ಲ. ನೋಂದಣಿ ಮಾಡುವ ಅಧಿಕಾರಿಗಳು ಕಾವೇರಿ ವೆಬ್‍ಸೈಟ್ ಮೂಲಕವೇ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಆಸ್ತಿ ಖರೀದಿಸಿದ ನಂತರ ಖಾತಾ ವರ್ಗಾವಣೆಯು ಆನ್‍ಲೈನ್ ಮೂಲಕವೇ ನಡೆಯುವುದರಿಂದ ಸಾರ್ವಜನಿಕರು ದಾಖಲೆ ಪತ್ರ ಪಡೆಯಲು ಬಿಬಿಎಂಪಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲಿದೆ ಎಂದು ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟರು.
ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಆನ್‍ಲೈನ್ ಮೂಲಕವೇ ಸಿಗುವಂತೆ ಮಾಡುವ ಉದ್ದೇಶದಿಂದ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಈ ಯೋಜನೆಯನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದರು.