ಭವಿಷ್ಯದ ಅಗ್ನಿ ಅನಾಹುತ ತಪ್ಪಿಸುವತ್ತ ಗಮನ ಹರಿಸಬೇಕಿದೆ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

#ರಮೇಶ್‍ಪಾಳ್ಯ
ಬೆಂಗಳೂರು :  ನಗರದಲ್ಲಿ ಯಾವುದೇ ಅಗ್ನಿ ಅನಾಹುತದಿಂದ ಸಂಭವಿಸುವ ಹಾನಿಯನ್ನು ತಪ್ಪಿಸುವತ್ತ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ಗಮನ ಹರಿಸಬೇಕಿದೆ. ಅದೃಷ್ಟವಶಾತ್ ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿಯಲ್ಲಿರುವ ರಾಸಾಯನಿಕ ಗೋದಾಮಿನಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಹೊಣೆ ಬಿಬಿಎಂಪಿ ಅಧಿಕಾರಿಗಳ ಮೇಲಿದೆ.

ರೇಖಾ ಕೆಮಿಕಲ್ಸ್ ಸಂಸ್ಥೆಯ ಗೋದಾಮು ಮಾದರಿಯಲ್ಲೇ ಸಾವಿರಾರು ರಾಸಾಯನಿಕ ಕಾರ್ಖಾನೆಗಳು ಹಾಗೂ ಗೋದಾಮುಗಳು ಜನವಸತಿ ಪ್ರದೇಶಗಳಲ್ಲಿವೆ. ಅಂತಹ ಕಾರ್ಖಾನೆ ಮತ್ತು ಗೋದಾಮುಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಬೇಕು.

ಜನವಸತಿ ಪ್ರದೇಶಗಳಲ್ಲಿ ಕೈಗಾರಿಕೆ ನಡೆಸುವವರು ಟ್ರೇಡ್ ಲೈಸೆನ್ಸ್ ಪಡೆದಿದ್ದಾರೆಯೇ, ಇಲ್ಲವೇ ಎಂಬುದನ್ನು ಪತ್ತೆಹಚ್ಚುವುದಲ್ಲದೆ ಅನಾಹುತ ಸಂಭವಿಸದಂತೆ ತಡೆಯಲು ಕಾರ್ಖಾನೆಗಳ ಮಾಲೀಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕಿದೆ. ಮೈಸೂರು ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲೇ ರೇಖಾ ಕೆಮಿಕಲ್ಸ್ ಸಂಸ್ಥೆಯಂತಹ ಸಾವಿರಾರು ಕೈಗಾರಿಕೆಗಳಿವೆ.

ಇದರ ಜತೆಗೆ ನಗರದ ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ನಾಯಂಡಹಳ್ಳಿ, ಬಸವೇಶ್ವರನಗರ ಮುಂತಾದ ಪ್ರದೇಶಗಳು ಮತ್ತು ಹಳೆ ಬೆಂಗಳೂರು ಭಾಗದಲ್ಲಿ ನಾಯಿಕೊಡೆಗಳಂತೆ ನೂರಾರು ಕಾರ್ಖಾನೆಗಳು, ಗೋದಾಮುಗಳಿವೆ. ಅವುಗಳಲ್ಲಿ ಅನಾಹುತ ತಡೆಗಟ್ಟುವಂತಹ ಯಾವುದೇ ಮಾಪನಗಳನ್ನು ಅಳವಡಿಸಿಕೊಳ್ಳದಿರುವುದು ಕಂಡುಬಂದಿದೆ.

ಕೆಲವು ಪ್ರದೇಶಗಳಲ್ಲಂತೂ ಅಗ್ನಿ ಅನಾಹುತ ಸಂಭವಿಸಿದಾಗ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಸಾಕಷ್ಟು ಸಾವು-ನೋವು ಸಂಭವಿಸಿರುವ ಉದಾಹರಣೆಗಳಿವೆ.  ಇಕ್ಕಟ್ಟಾದ ಪ್ರದೇಶಗಳಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸುವಾಗ ಅಗ್ನಿಶಾಮಕ ದಳದಿಂದ ಎನ್‍ಒಸಿ ಪಡೆಯುವುದನ್ನು ಕಡ್ಡಾಯಗೊಳಿಸಿದ್ದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ.

ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಇನ್ನು ಮುಂದಾದರೂ ಪೊಲೀಸರ ಸಹಕಾರದೊಂದಿಗೆ ನಗರದಾದ್ಯಂತ ನಿಯಮ ಮೀರಿ ನಿರ್ಮಿಸಿರುವ ಕಾರ್ಖಾನೆಗಳು ಹಾಗೂ ಗೋದಾಮು ಕಟ್ಟಡಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Facebook Comments