ಬೆಂಗಳೂರಿಗರೇ..ಎಲ್ಲೆಂದರಲ್ಲಿ ಕಸ ಹಾಕಿದರೆ ತೆರಬೇಕಾಗುತ್ತೆ ಭಾರೀ ದಂಡ….!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.4- ಇನ್ನು ಮುಂದೆ ಕಸ ವಿಂಗಡಣೆ ಮಾಡದಿದ್ದರೆ, ಎಲ್ಲೆಂದರಲ್ಲಿ ಉಗುಳಿದರೆ, ಪಾಲಿಕೆ ಸೂಚಿಸಿದ ನಿಯಮಗಳನ್ನು ಜಾರಿಗೆ ತರದೆ ಇದ್ದರೆ, ರಸ್ತೆ ಬದಿ ಕಟ್ಟಡದ ತ್ಯಾಜ್ಯ ಸುರಿದರೆ ಭಾರೀ ದಂಡ ಕಟ್ಟಬೇಕಾಗುತ್ತದೆ..! ಸ್ವಚ್ಛ ಭಾರತ ಸರ್ವೇಕ್ಷಣದಲ್ಲಿ ಉತ್ತಮ ರಾಂಕ್ ಗಳಿಸಲು ರೋಡ್ ಮ್ಯಾಪ್ ಸಿದ್ಧಪಡಿಸಿರುವ ಬಿಬಿಎಂಪಿ 2020ರ ವೇಳೆಗೆ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಜಂಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನ ಮತ್ತಿತರ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡಿದರೆ ಮೊದಲ ಬಾರಿಗೆ 200ರೂ. ದಂಡ, ಎರಡನೆ ಬಾರಿಗೆ 1000ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಪಾಲಿಕೆ ನೀತಿಯಂತೆ ಹಸಿ ಮತ್ತು ಒಣ ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಬೇಕು.

ವಸತಿ ಪ್ರದೇಶದವರು ಹೀಗೆ ಮಾಡದಿದ್ದರೆ ಮೊದಲ ಬಾರಿಗೆ 200ರೂ., ನಂತರ 1000ರೂ. ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಕಟ್ಟಡದವರಿಗೆ ಮೊದಲ ಬಾರಿಗೆ 1000ರೂ., ನಂತರ 5000ರೂ. ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಆಸ್ಪತ್ರೆ ತ್ಯಾಜ್ಯವನ್ನು ವಿಂಗಡಣೆ ಮಾಡಬೇಕು. ವಿಂಗಡಿಸದಿದ್ದರೆ ಮೊದಲ ಬಾರಿಗೆ 1000ರೂ. ನಂತರ 5000ರೂ. ದಂಡ ವಿಧಿಸಲಾಗುತ್ತದೆ.

ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿದರೆ ಮೊದಲ ಬಾರಿಗೆ 5000, ಆನಂತರ 25,000ರೂ. ದಂಡ ವಿಧಿಸಲಾಗುತ್ತದೆ. ಇದರ ಜತೆಗೆ ಕಸಕ್ಕೆ ಬೆಂಕಿ ಇಡುವುದು ಮತ್ತಿತರ ಕೆಲಸಗಳಿಗೆ ಕಾನೂನು ಪ್ರಕಾರ ಭಾರೀ ದಂಡ ವಿಧಿಸುವ ಹೊಸ ನಿಯಮವನ್ನು ಬಿಬಿಎಂಪಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಮನೆ, ಮನೆಯಿಂದ ಕಸ ಸಂಗ್ರಹಣೆಯನ್ನು ಶೇ.100ರಷ್ಟು ಯಶಸ್ವಿಗೊಳಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ 2019ರ ವೇಳೆಗೆ ಶೇ.90ರಷ್ಟು ಯಶಸ್ಸು ಸಾಧಿಸಲಾಗುವುದು. ಡಿಸೆಂಬರ್ ವೇಳೆಗೆ ಶೇ.100ರಷ್ಟು ಕಸ ಸಂಗ್ರಹಣೆ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ತ್ಯಾಜ್ಯ ವಿಲೇವಾರಿ ಘಟಕಗಳಿಗೆ ವಿಂಗಡಣೆ ಮಾಡಿದ ಕಸ ಕಳಿಸುವ ಸಾಮಥ್ರ್ಯ ಹೆಚ್ಚಳ ಮಾಡಲಾಗುವುದು.

ನಗರದಲ್ಲಿನ ರಸ್ತೆಗಳ ಬ್ಲಾಕ್ ಸ್ಪಾಟ್‍ಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವುದು. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಸಿ ಮತ್ತು ಒಣತ್ಯಾಜ್ಯ ಸಂಗ್ರಹಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಗುತ್ತಿಗೆ ಪಡೆದವರು 198 ವಾರ್ಡ್‍ಗಳಲ್ಲಿ ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಬೇಕು. ಕಸದ ಗಾಡಿಗೆ ವಿಂಗಡಣೆ ಮಾಡದೆ ತ್ಯಾಜ್ಯ ನೀಡುವಂತಿಲ್ಲ. ಇದಕ್ಕೆ ತಪ್ಪಿದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಸ ಸಂಗ್ರಹಣೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಚಾಲಕರು ಹಾಗೂ ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ಕಡ್ಡಾಯವಿರುತ್ತದೆ. ಕಸ ವಿಲೇವಾರಿ ಸಂಬಂಧ ದೂರು ನೀಡಲು ಸ್ಮಾರ್ಟ್ ರೂಮ್ ಹಾಗೂ ಸಹಾಯ ಮೊಬೈಲ್ ಆ್ಯಪ್ ಪರಿಚಯಿಸಲಾಗುತ್ತದೆ ಎಂದು ಹೇಳಿದರು. ಕಸ ಬೇರ್ಪಡಿಸದೆ ನೀಡುವವರಿಗೆ ದಂಡ ವಿಧಿಸುವ ಬಗ್ಗೆ ಪೌರ ಕಾರ್ಮಿಕರು ಮಾಹಿತಿ ನೀಡುವುದು ಕಡ್ಡಾಯ.

ಮನೆ ಮನೆ ಕಸ ಸಂಗ್ರಹಣೆಯಲ್ಲಿ ಶೇ.100ರಷ್ಟು ಯಶಸ್ವಿಯಾದ ಪೌರ ಕಾರ್ಮಿಕರಿಗೆ ಶೇ.5ರಷ್ಟು ಪ್ರೋತ್ಸಾಹಧನ ನೀಡಲು ತೀರ್ಮಾನಿಸಿದೆ. ಒಟ್ಟಾರೆ ನಗರ ಸ್ವಚ್ಛ , ಸುಂದರವಾಗಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಯರ್ ಹಾಗೂ ಆಯುಕ್ತರು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ