ಡೊನೇಷನ್ ಪೀಕುತ್ತಿರುವ ಖಾಸಗಿ ಶಾಲಾ-ಕಾಲೇಜುಗಳಿಗೆ ಬಿಬಿಎಂಪಿ ಬಿಗ್ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.17- ಸರ್ಕಾರದಿಂದ ತೆರಿಗೆ ವಿನಾಯ್ತಿ ಇನ್ನಿತರೆ ಸವಲತ್ತುಗಳನ್ನು ಪಡೆದು ಲಕ್ಷಗಟ್ಟಲೇ ಡೊನೇಷನ್ ಪಡೆಯುವ ಖಾಸಗಿ ಶಾಲಾ-ಕಾಲೇಜುಗಳಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ.ಇಂತಹ ಸುಮಾರು 3000ಕ್ಕೂ ಅಧಿಕ ಶಾಲಾಕಾಲೇಜುಗಳ ಮಾಹಿತಿ ಸಂಗ್ರಹಿಸಿರುವ ಬಿಬಿಎಂಪಿ ತೆರಿಗೆ ವಿಧಿಸಲು ಮುಂದಾಗಿದೆ.

ಕೆಎಂಸಿ ಕಾಯ್ದೆ 110 ಜಿ ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ಮತ್ತಿತರ ಸವಲತ್ತುಗಳ ವಿನಾಯ್ತಿ ಪಡೆದಿದ್ದರೂ ಲಕ್ಷಾಂತರ ಡೊನೇಷನ್‍ನ್ನು ಪಡೆಯುತ್ತಿವೆ. ಇಂತಹ ಶಾಲೆಗಳಿಂದ ತೆರಿಗೆ ಸಂಗ್ರಹ ಮಾಡಲು ಪಾಲಿಕೆ ಅಧಿಕಾರಿಗಳು ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದಾರೆ.

ಮೇಯರ್ ಗೌತಮ್‍ಕುಮಾರ್ ಜೈನ್ ಅವರು ಈ ಪ್ರಸ್ತಾವನೆಯನ್ನು ಕಂದಾಯ ಸಚಿವ ಅಶೋಕ್ ಅವರ ಮುಂದೆ ಸಲ್ಲಿಸಲು ನಿರ್ಧರಿಸಿದ್ದಾರೆ. ಸರ್ಕಾರ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದರೆ ಪಾಲಿಕೆ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲ ಸವಲತ್ತುಗಳನ್ನು ಪಡೆದು ಉಚಿತ ಶಿಕ್ಷಣ ನೀಡುವುದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿಕೊಳ್ಳುತ್ತವೆ. ಆದರೆ ಸಾಕಷ್ಟು ಡೊನೇಷನ್‍ಗಳನ್ನು ವಿದ್ಯಾರ್ಥಿಗಳಿಂದ ಪಡೆಯುತ್ತವೆ.

ಇಂತಹ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿಧಿಸುವುದು ಸೂಕ್ತ ಎಂಬುದು ಬಿಬಿಎಂಪಿಯ ಲೆಕ್ಕಾಚಾರವಾಗಿದೆ. ತೆರಿಗೆ ವಿನಾಯ್ತಿ ಸವಲತ್ತುಗಳನ್ನು ಪಡೆದೇ ಈ ಮಟ್ಟದ ಡೊನೇಷನ್ ಪೀಕಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಿಬಿಎಂಪಿ ತೆರಿಗೆ ವಸೂಲಿ ಮಾಡಿದರೆ ಇನ್ನೆಷ್ಟು ಡೊನೇಷನ್ ವಸೂಲಿ ಮಾಡುತ್ತದೆ ಎಂಬ ಆತಂಕ ಎದುರಾಗಿದೆ.

ಸರ್ಕಾರ ವಿಧಿಸುವ ತೆರಿಗೆ ಹೊರೆಯನ್ನು ಶಿಕ್ಷಣ ಸಂಸ್ಥೆಗಳು ನೇರವಾಗಿ ವಿದ್ಯಾರ್ಥಿಗಳ ಮೇಲೆ ಹೊರೆಸುತ್ತಾರೆ. ಸರ್ಕಾರದ ಇಂಥ ಕ್ರಮದಿಂದ ಶಿಕ್ಷಣ ಮತ್ತಷ್ಟು ದುಬಾರಿಯಾದರೂ ಆಶ್ಚರ್ಯವಿಲ್ಲ.

Facebook Comments

Sri Raghav

Admin