ಅನುಮಾನ ಮೂಡಿಸಿದ ಬಿಬಿಎಂಪಿ ಜಾಹಿರಾತು ಒಪ್ಪಿಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಜಾಹಿರಾತು ಪ್ರದರ್ಶನಕ್ಕೆ ಒಪ್ಪಿಗೆ ಆದೇಶ ಹೊರ ಬಿದ್ದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಜಾಹಿರಾತು ಪ್ರದರ್ಶನದ ಹಿಂದೆ ಮಾಫಿಯಾ ಕೈವಾಡವಿದೆ, ಎಲ್ಲೆಂದರಲ್ಲಿ ಜಾಹಿರಾತು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ , ಸಾಮಾಜಿಕ ಹೋರಾಟಗಾರ ಸಾಯಿದತ್ತ ಮತ್ತಿತರರು ಹೋರಾಟ ನಡೆಸಿದ್ದರು.

ಅಕ್ರಮ ಜಾಹಿರಾತು ಫಲಕಗಳಿಗೆ ಕಡಿವಾಣ ಹಾಕುವಂತೆ ಸಾಯಿ ದತ್ತ ಅವರು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದರು. ಹೀಗಾಗಿ ನ್ಯಾಯಾಲಯ ನಗರದಲ್ಲಿ ಎಲ್ಲೂ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಬಿಬಿಎಂಪಿ ಅಧಿಕಾರಿ ಗಳು ಜಾಹಿರಾತು ಫಲಕಗಳು, ಬಂಟಿಂಗ್ಸ್‍ಗಳನ್ನು ತೆರವುಗೊಳಿಸಿ ಯಾವುದೇ ಜಾಹಿರಾತು ಪ್ರದರ್ಶ ನಕ್ಕೆ ಅವಕಾಶ ಕೊಟ್ಟಿರಲಿಲ್ಲ.

ಇದೀಗ ಜಾಹಿರಾತು ಮಾಫಿಯಾಗಳು ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಯಶಸ್ವಿಯಾಗಿದ್ದು , ನಗರದಲ್ಲಿ ಮತ್ತೆ ಜಾಹಿರಾತು ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಆಯ್ದ ಕೆಲವು ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಕಡೆ ಜಾಹಿರಾತು ಪ್ರದರ್ಶನ ಮಾಡಬಹುದು ಎಂದು ಸರ್ಕಾರಿ ಆದೇಶ ಹೊರ ಬಿದ್ದಿದೆ.

ಜಾಹಿರಾತು ಪ್ರದರ್ಶಿಸು ವವರು ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅವರ ಅನುಮತಿ ಪಡೆದ ನಂತರ ಖಾಸಗಿ ನಿವೇಶನ, ಕಟ್ಟಡ, ಮೇಲ್ಸೇತುವೆ, ಕೇಂದ್ರ-ರಾಜ್ಯ ಸರ್ಕಾರಿ ಕಟ್ಟಡಗಳಲ್ಲಿ ಜಾಹಿರಾತು ಪ್ರದರ್ಶನ ಮಾಡಬಹುದಾಗಿದೆ. ಮೂರು ವರ್ಷಗಳಿಗೊಮ್ಮೆ ಪರವಾನಗಿ ನವೀಕರಣ ಮಾಡಿ ಕೊಳ್ಳಲು ಸರ್ಕಾರಿ ಆದೇಶದಲ್ಲಿ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಈ ಹಿಂದೆ ಜಾಹಿರಾತು ಪ್ರದರ್ಶನ ವಿರುದ್ಧ ಬಿಜೆಪಿ ಮುಖಂಡರೇ ಹೋರಾಟ ಮಾಡಿದ್ದರು.

ಇದೀಗ ಬಿಜೆಪಿ ಸರ್ಕಾರವೇ ಜಾಹಿರಾತು ಪ್ರದರ್ಶನಕ್ಕೆ ಅನುಮತಿ ನೀಡಿರುವುದರ ಹಿಂದೆ ಭ್ರಷ್ಟಾಚಾರದ ವಾಸನೆ ಕಂಡು ಬಂದಿದೆ. ಸರ್ಕಾರದ ಈ ಆದೇಶಕ್ಕೆ ಜನಾಕ್ರೋಶ ವ್ಯಕ್ತವಾಗಿದ್ದು , ಹಲವಾರು ಸಾಮಾಜಿಕ ಹೋರಾಟಗಾರರು ಮತ್ತೆ ಜಾಹಿರಾತು ವಿರುದ್ಧ ನ್ಯಾಯಾಲ ಯದ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.

ಜಾಹಿರಾತು ಮಾಫಿಯಾ ದಮನಕ್ಕೆ ತೀರ್ಮಾನಿಸಿದ್ದ ಬಿಜೆಪಿ ಸರ್ಕಾರದವರೇ ಮತ್ತೆ ಮಾಫಿಯಾಗೆ ಮಣಿದಿರುವುದು ಕೆಲ ಸ್ವಪಕ್ಷೀಯರ ಆಕ್ರೋಶಕ್ಕೂ ಕಾರಣವಾಗಿದೆ. ಹೊಸ ಸಿಎಂ ಅಧಿಕಾರ ಸ್ವೀಕರಿಸಿದ ದಿನವೇ ಇಂತಹ ಜನವಿರೋಧಿ ತೀರ್ಮಾನ ಕೈಗೊಂಡಿರುವುದು ಮುಂದಿನ ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ಪ್ರತಿಪಕ್ಷಗಳ ಮುಖಂಡರು ಟೀಕಿಸಿದ್ದಾರೆ.

Facebook Comments