ಬಿಬಿಎಂಪಿ ಮೇಯರ್, ಉಪಮೇಯರ್ ಅಧಿಕಾರಾವಧಿ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

# ವೈ.ಎಸ್. ರವೀಂದ್ರ
ಬೆಂಗಳೂರು,ಸೆ.5- ಬಿಬಿಎಂಪಿಗೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡದೆ ಹಾಲಿ ಇರುವ ವಾರ್ಡ್‍ಗಳನ್ನು 198ರಿಂದ 225ಕ್ಕೆ ವಿಂಗಡಿಸಿ 4 ವಿಭಾಗ, 12 ವಲಯಗಳು ಮತ್ತು ಮೇಯರ್ ಹಾಗೂ ಉಪಮೇಯರ್ ಅಧಿಕಾರದ ಅವಧಿಯನ್ನು ಎರಡೂವರೆ ವರ್ಷಕ್ಕೆ ಹೆಚ್ಚಿಸುವ ತೀರ್ಮಾನಕ್ಕೆ ಸರ್ಕಾರ ಬಂದಿದೆ.

ಈ ತಿಂಗಳ ಅಂತ್ಯಕ್ಕೆ ಬಿಬಿಎಂಪಿ ಹಾಲಿ ಸದಸ್ಯರ ಅಧಿಕಾರ ಅವಧಿ ಮುಗಿಯಲಿದ್ದು, ಈ ವರ್ಷ ಚುನಾವಣೆಯನ್ನು ನಡೆಸದೆ ಹಿರಿಯ ಐಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ.

ಇದೇ 21ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಬಿಬಿಎಂಪಿ ವಾರ್ಡ್ ಹೆಚ್ಚಳ ಮಾಡುವ ಕರ್ನಾಟಕ ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ 2015ನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಧ್ಯಂತರ ವರದಿಯನ್ನು ಸರ್ಕಾರ ಮಂಡಿಸಲಿದೆ.

ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತವಿದ್ದರೆ ಪರಿಷತ್‍ನಲ್ಲಿ ಅಗತ್ಯ ಸಂಖ್ಯೆಯ ಬೆಂಬಲವಿಲ್ಲ. ಪೂರ್ಣ ಪ್ರಮಾಣದ ಜಂಟಿ ಶಾಸಕಾಂಗ ಸಮಿತಿ ವರದಿಯನ್ನು ಮಂಡಿಸಿದರೆ ಬಿದ್ದುಹೋಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಸದ್ಯ ಮಧ್ಯಂತರ ವರದಿಯನ್ನು ಮಾತ್ರ ಮಂಡಿಸಲು ತೀರ್ಮಾನಿಸಲಾಗಿದೆ.

ಸರ್ಕಾರ ಈ ಎಲ್ಲಾ ಲೆಕ್ಕಾಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವರ್ಷದ ಅಂತ್ಯದವರೆಗೂ ಚುನಾವಣೆ ನಡೆಯುವುದು ಬಹುತೇಕ ಅನುಮಾನ. ಆ ವೇಳೆಗೆ ವಾರ್ಡಗಳ ಪುನರ್ ವಿಂಗಡಣೆ, ಮೀಸಲಾತಿ, ನಿಗದಿ, 4 ವಿಭಾಗ, ವಲಯಗಳ ಹೆಚ್ಚಳ ಹಾಗೂ ಮೇಯರ್ ಅಧಿಕಾರ ಅವಧಿಯನ್ನು ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಹೆಚ್ಚಳ ಮಾಡುವ ಕಾಯ್ದೆಗೆ ತಿದ್ದುಪಡಿ ಮಾಡಲು ಜಂಟಿ ಶಾಸಕಾಂಗ ಸಮಿತಿ ತೀರ್ಮಾನಿಸಿದೆ.

ಇದೇ 21ರಂದು ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಜಂಟಿ ಶಾಸಕಾಂಗ ಸಮಿತಿಯ ಅಧ್ಯಕ್ಷ ಹಾಗೂ ಸರ್.ಸಿ.ವಿ.ರಾಮನ್‍ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ರಘು ಅವರು ಮಧ್ಯಂತರ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.

# ವಾರ್ಡ್ ಸಂಖ್ಯೆ ಹೆಚ್ಚಳ:
ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಾರ್ಡ್‍ಗಳನ್ನು ಪುನರ್ ವಿಂಗಡಿಸಿ ಬೃಹನ್ ಮುಂಬೈ ಮಾದರಿಯಲ್ಲಿ 100 ವಾರ್ಡ್‍ಗಳಿದ್ದ ಸಂಖ್ಯೆಯನ್ನು 198ಕ್ಕೆ ಹೆಚ್ಚಳ ಮಾಡಲಾಗಿತ್ತು. ಈಗಾಗಲೇ 10 ವರ್ಷ ಪೂರೈಸಿರುವ ಕಾರಣ ಬೆಂಗಳೂರು ಮಹಾನಗರದಲ್ಲಿ ಜನಸಂಖ್ಯೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಸರಿಸುಮಾರು 1 ಕೋಟಿಗೂ ಅಧಿಕ ಇರುವುದರಿಂದ ಜನಸಂಖ್ಯೆಗೆ ಅನುಗುಣವಾಗಿಯೇ ವಾರ್ಡ್‍ಗಳನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಇದಕ್ಕೆ ಜಂಟಿ ಶಾಸಕಾಂಗ ಸಮಿತಿ ಸಮ್ಮತಿಸಿದ್ದು, 198 ವಾರ್ಡ್‍ಗಳಿದ್ದ ಬಿಬಿಎಂಪಿ ಮುಂದಿನ ದಿನಗಳಲ್ಲಿ 225ಕ್ಕೆ ಏರಿಕೆಯಾಗಲಿದೆ.

ದೇಶದಲ್ಲೇ ಮುಂಬೈ ಹೊರತುಪಡಿಸಿದರೆ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಆದರೆ ಬಿಬಿಎಂಪಿಗೆ ಯಾವುದೇ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡದೆ ಹಾಲಿ ಇರುವ ವ್ಯಾಪ್ತಿಯಲ್ಲೇ ವಾರ್ಡ್‍ಗಳ ವಿಂಗಡಣೆಯಾಗಲಿದೆ ಎಂದು ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

# ಮೇಯರ್ ಅಧಿಕಾರ ಅವಧಿ ಹೆಚ್ಚಳ:
ಇನ್ನು ಮುಂದೆ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಅಧಿಕಾರ ಅವಧಿ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಏರಿಕೆಯಾಗಲಿದೆ. ಈ ಹಿಂದೆ ಮೇಯರ್ ಅಧಿಕಾರ ಅವಧಿಯನ್ನು 5 ವರ್ಷಕ್ಕೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಬಂದಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ.

ಸಮಿತಿಯು ಮೇಯರ್ ಮತ್ತು ಉಪಮೇಯರ್ ಅವಧಿಯನ್ನು ಎರಡೂವರೆ ವರ್ಷಕ್ಕೆ ಹೆಚ್ಚಳ ಮಾಡಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ. ಜೊತೆಗೆ ಒಂದು ವರ್ಷದ ಅವಧಿಯೊಳಗೆ ಮೇಯg ಮತ್ತು ಉಪಮೇಯರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವಂತಿಲ್ಲ ಎಂಬ ನಿಯಮವು ಜಾರಿಯಾಗಲಿದೆ.

ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಬಿಬಿಎಂಪಿಯನ್ನು 3ರಿಂದ 4 ವಿಭಾಗಗಳನ್ನಾಗಿ ವಿಂಗಡಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಆದರೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ವಿಧೇಯಕವೂ ವಿಧಾನಪರಿಷತ್‍ನಲ್ಲಿ ಬಿದ್ದುಹೋಗಿ ಕೊನೆಗೆ ಸೆಲೆಕ್ಟ್ ಕಮಿಟಿಗೆ ನೀಡಲಾಗಿತ್ತು.

ನಂತರ ಸರ್ಕಾರ ಬದಲಾಗಿದ್ದರಿಂದ ಈ ಪ್ರಸ್ತಾವವೇ ನೆನೆಗುದಿಗೆ ಬಿದ್ದಿತ್ತು. ಈಗ ಬಿಬಿಎಂಪಿಯನ್ನು ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಉತ್ತರ ಎಂಬ 4 ಕೇಂದ್ರಗಳು ಅಸ್ತಿತ್ವಕ್ಕೆ ಬರಲಿದೆ.ಈಗಿರುವ 8 ವಲಯಕ್ಕೆ ಬದಲಾಗಿ 12 ವಲಯಗಳು ಮುಂದಿನ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ. ಒಟ್ಟು 15 ವಲಯಗಳನ್ನು ಮಾಡಬೇಕೆಂದು ಸಮಿತಿ ತೀರ್ಮಾನಿಸಿತ್ತು.

ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಹಾಯಕ ಆಯುಕ್ತರು ಹಾಗೂ ಕೆಳಹಂತದ ಅಧಿಕಾರಿಗಳನ್ನು ನೇಮಕ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ಇದು ಮತ್ತೊಂದು ರೀತಿಯ ಬಿಳಿಯಾನೆಯಾಗಲಿದೆ ಎಂಬ ಕಾರಣಕ್ಕಾಗಿ 12 ವಲಯಗಳಿಗೆ ಸೀಮಿತಗೊಳಿಸಲು ಸಮಿತಿ ತೀರ್ಮಾನಿಸಿದೆ. ಮೂಲಗಳ ಪ್ರಕಾರ 40ರಿಂದ 45 ಸಾವಿರಕ್ಕೆ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‍ಗಳು ವಿಭಾಗವಾಗಲಿವೆ.

# ಕೆಲವು ವಾರ್ಡ್‍ಗಳಿಗೆ ಕೋಕ್: 
ಹೊಸದಾಗಿ 225 ವಾರ್ಡ್‍ಗಳು ರಚನೆಯಾದರೆ ಹಾಲಿ ಇರುವ ಸರಿಸುಮಾರು 40ರಿಂದ 50 ವಾರ್ಡ್‍ಗಳು ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ. ಮುಖ್ಯವಾಗಿ ಪ್ರಮುಖ ಸದಸ್ಯರ ವಾರ್ಡ್‍ಗಳು ರದ್ದಾಗಲಿವೆ. ಇದರ ಜೊತೆಗೆ 225 ವಾರ್ಡ್‍ಗಳಲ್ಲಿ ಕನಿಷ್ಟ ಪಕ್ಷ 40ರಿಂದ 50 ಮೀಸಲು ವಾರ್ಡ್‍ಗಳು ರಚನೆಯಾಗಲಿವೆ. ಹೀಗೆ ಬಿಬಿಎಂಪಿಗೆ ಅಮೂಲಾಗ್ರ ಬದಲಾವಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ಮನಸ್ಸಿನಲ್ಲಿ ಮಂಡಕ್ಕಿ ಮೇಯುತ್ತಿದ್ದವರಿಗೆ ಹತಾಶೆ ಉಂಟಾಗುವುದು ಖಚಿತ.

# ಸಮಿತಿ ಸದಸ್ಯರು:
ಸದನದ ನಿರ್ಣಯದಂತೆ 2020 ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನುಈ ಸಮಿತಿ ಪರಿಶೀಲನೆ ನಡೆಸಿ ಸಭಾಧ್ಯಕ್ಷರಿಗೆ ವರದಿಯನ್ನು ಸಲ್ಲಿಸಬೇಕಾಗಿದೆ. ಸಮಿತಿಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ನ ಸದಸ್ಯರು ಒಳಗೊಂಡಿದ್ದಾರೆ. ಸಮಿತಿಯಲ್ಲಿ ವಿಧಾನಸಭಾ ಸದಸ್ಯರಾದ ಎಸ್ ರಘು, ರವಿ ಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ, ಸತೀಶ್ ರೆಡ್ಡಿ, ಅರವಿಂದ್ ಲಿಂಬಾವಳಿ, ಉದಯ್ ಬಿ ಗರುಡಾಚಾರ್, ಎಸ್ ಆರ್ ವಿಶ್ವನಾಥ್, ನರಸಿಂಹನಾಯಕ, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಆರ್. ಮಂಜುನಾಥ್, ಶ್ರೀನಿವಾಸಮೂರ್ತಿ ಇದ್ದಾರೆ.

ಇನ್ನು ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದ ರಾಜು, ಎಂ. ನಾರಾಯಣ ಸ್ವಾಮಿ, ಪಿ. ಆರ್ ರಮೇಶ್ ಕೆ. ಎ ತಿಪ್ಪೇಸ್ವಾಮಿ, ಎನ್. ರವಿಕುಮಾರ್, ಅ. ದೇವೇಗೌಡ, ತೇಜಸ್ವಿ ಗೌಡರನ್ನು ಸಮಿತಿ ಒಳಗೊಂಡಿದೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಯ ನಿಯಮ 255(2) ಮೇರೆಗೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವಜೆ. ಮಾಧುಸ್ವಾಮಿ ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪನವರು ನಿಯೋಜಿಸಿದ್ದಾರೆ.

Facebook Comments