ಬಿಬಿಎಂಪಿ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಲು ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.8- ಇಂದು ಸಂಜೆ ಅಥವಾ ನಾಳೆಯೊಳಗೆ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಪ್ರಸ್ತುತ ಬಿಬಿಎಂಪಿಯಲ್ಲಿರುವ ಬಿಜೆಪಿ ಆಡಳಿತ ಕೊನೆಗೊಳ್ಳಲಿದೆ.

ಅಷ್ಟರೊಳಗೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಪೂರ್ಣಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟನೆ ಮಾಡಿ ಸಂಜೆ ಅಥವಾ ನಾಳೆಯೊಳಗೆ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ.

ಅದಕ್ಕಾಗಿಯೇ ನಿನ್ನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಗರಾದ್ಯಂತ ಬಿಬಿಎಂಪಿ ನಡೆಸಿದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಿದ್ದಾರೆ. ಇಂದು ಕೂಡ ಐದಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂದು ಉದ್ಘಾಟನೆ ನೆರವೇರಿಸಿದ್ದಾರೆ.

ಬಿಬಿಎಂಪಿಯನ್ನು ಏಕಾಏಕಿ ಸೂಪರ್ ಸೀಡ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಆಯುಕ್ತರು ವರದಿ ನೀಡಬೇಕು. ಈಗಾಗಲೇ ಆಯುಕ್ತರು ಬಿಬಿಎಂಪಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಬಿಬಿಎಂಪಿಯ ವಾರ್ಷಿಕ ಆಯವ್ಯಯ ಪ್ರಮಾಣ 10 ಸಾವಿರ ಕೋಟಿ. ಆದರೆ ಸಾಲ 21 ಸಾವಿರ ಕೋಟಿ ಇದೆ.

ಆರ್ಥಿಕ ಪರಿಸ್ಥಿತಿ ಸರಿದೂಗಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ ಎಂಬ ವರದಿಯನ್ನು ಸರ್ಕಾರಕ್ಕೆ ಎರಡು ದಿನಗಳ ಹಿಂದೆಯೇ ಆಯುಕ್ತರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮದೇ ಪಕ್ಷ ಆಡಳಿತವಿದ್ದಾಗ ಸೂಪರ್ ಸೀಡ್ ಮಾಡಿದರೆ ಕೆಟ್ಟ ಸಂದೇಶ ಹೋಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಾವಧಿ ಸಂಪೂರ್ಣಗೊಂಡು ಕೊನೆಯ ಒಂದೆರಡು ದಿನಗಳು ಇರುವಾಗ ಸೂಪರ್ ಸೀಡ್ ಮಾಡಿ ಆಡಳಿತ ಅಧಿಕಾರಿಯನ್ನು ನೇಮಿಸುವ ತಂತ್ರಗಾರಿಕೆಯನ್ನು ಸರ್ಕಾರ ರೂಪಿಸಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಬಿಬಿಎಂಪಿ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಹಾಗು ಚುನಾವಣೆಯನ್ನು ಮುಂದೂಡುವ ತಂತ್ರಗಾರಿಕೆಯೂ ಕೂಡ ಆಗಿದೆ. ಕಾನೂನು ತೊಡಕು ಎದುರಾಗಬಹುದು ಎಂಬ ನಿಟ್ಟಿನಲ್ಲಿ ಸೂಪರ್ ಸೀಡ್ ಮಾಡಲು ಮುಂದಾಗಿದೆ.

ಅಧಿಕಾರದ ಅವಧಿ ಇರುವಾಗಲೇ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಿದರೆ ಕಾನೂನು ಕುಣಿಕೆಯಿಂದಲೂ ಬಚಾವ್ ಆಗಬಹುದು. ಸದ್ಯ ಚುನಾವಣೆಯನ್ನು ಮುಂದೂಡಬಹುದು ಎಂಬ ರಾಜಕೀಯ ಲೆಕ್ಕಾಚಾರ ಕೂಡ ಇದರಲ್ಲಿ ಅಡಗಿದೆ.

Facebook Comments