ಬಿಬಿಎಂಪಿ ಆಡಳಿತಾಧಿಕಾರಿಯಾಗಿ ವಂದಿತಾ ಶರ್ಮಾ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10- ಬಿಬಿಎಂಪಿ ಅಧಿಕಾರಾವಧಿ ಇಂದು ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಅವರನ್ನು ಬಿಬಿಎಂಪಿ ಆಡಳಿತಾಧಿಕಾರಿಯನ್ನಾಗಿ ರಾಜ್ಯಸರ್ಕಾರ ನೇಮಿಸಿದ್ದು, ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮ ಕೊಂಕಣ್ ರೈಲ್ವೆ ನಿರ್ದೇಶಕರಾಗಿ ಜೆಎಸ್‍ಡಬ್ಲ್ಯೂ, ಜಿಂದಾಲ್ ಸ್ಟೀಲ್ ಲಿಮಿಟೆಡ್ ನಾಮ ನಿರ್ದೇಶಕರಾಗಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾಗಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು.

ಪ್ರವಾಸೋದ್ಯಮ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ, ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

1986 ಖೇಡರ್ ಐಎಎಸ್ ಅಧಿಕಾರಿಯಾಗಿರುವ ಇವರು ಹಿರಿಯ ಐಎಎಸ್ ಅಧಿಕಾರಿ ಐ.ಎನ್.ಎಸ್.ಪ್ರಸಾದ್ ಅವರ ಪತ್ನಿ. ಪ್ರಸ್ತುತ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನೇಮಕವಾಗಿದ್ದು, ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.

ಬಿಬಿಎಂಪಿ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ. ಚುನಾವಣೆ ನಡೆದು ಹೊಸ ಸಮಿತಿ ಅಧಿಕಾರಕ್ಕೆ ಬರಬೇಕಿತ್ತು. ಆದರೆ, ಚುನಾವಣಾ ಆಯೋಗ ಇನ್ನೂ ಚುನಾವಣೆ ನಡೆಸಿಲ್ಲ. ಚುನಾವಣೆ ನಡೆಯುವವರೆಗೆ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕಿದೆ. ನಾಳೆಯಿಂದ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿರುವುದಿಲ್ಲ. ಆಡಳಿತಾಧಿಕಾರಿಗಳ ಉಸ್ತುವಾರಿಯಲ್ಲಿ ಆಡಳಿತ ನಡೆಯಲಿದೆ.

Facebook Comments